ಟಿಕೆಟ್ ರಹಿತ ಪ್ರಯಾಣ; 6 ಲಕ್ಷ ರೂ. ದಂಡ ವಸೂಲಿ ಮಾಡಿದ BMTC
ಬೆಂಗಳೂರು, ಅ.10: ಬಿಎಂಟಿಸಿ ಬಸ್‍ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ 3,027 ಮಂದಿ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಒಟ್ಟು 6,10,880 ರೂ.ದಂಡ ವಸೂಲಿ ಮಾಡಲಾಗಿದೆ. ಹಾಗೆಯೇ ಸಂಸ್ಥೆಯ ನಿರ್ವಾಹಕರ ವಿರುದ್ಧ 906 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಅಲ್ಲದೆ, ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 387 ಪುರುಷ ಪ್ರಯಾಣಿಕರಿಂದ ಒಟ್ಟು 38,700ರೂ. ದಂಡ ವಿಧಿಸಲಾಗಿರುತ್ತದೆ. ಒಟ್ಟಾರೆಯಾಗಿ ಸೆಪ್ಟೆಂಬರ್-ತಿಂಗಳಲ್ಲಿ 3414 ಪ್ರಯಾಣಿಕರಿಂದ ಒಟ್ಟು 6,49,580 ರೂ.ದಂಡವನ್ನು ವಸೂಲಿ ಮಾಡಲಾಗಿದೆ.
ಪ್ರಯಾಣಿಕರು ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್, ದಿನದ ಪಾಸು, ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸಬೇಕು. ಇದರಿಂದ ದಂಡ ಕಟ್ಟುವುದನ್ನು ತಡೆಯಬಹುದು. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕು ಎಂದು ಬಿಎಂಟಿಸಿ ತಿಳಿಸಿದೆ.