ರೈತ ಬಣಗಳ ಒಗ್ಗೂಡಿಸಿ ಡಿ.23ಕ್ಕೆ ಬೃಹತ್ ಸಭೆ : ದರ್ಶನ್ ಪುಟ್ಟಣಯ್ಯ
ದರ್ಶನ್ ಪುಟ್ಟಣ್ಣಯ್ಯ
ಬೆಂಗಳೂರು : ವಿವಿಧ ಕಾರಣಗಳಿಂದ ಒಡೆದು ಹಲವು ಸಂಘಟನೆಗಳಾಗಿ ಚದುರಿ ಹೋಗಿರುವ ರೈತ ಸಂಘವನ್ನು ಒಗ್ಗೂಡಿಸಿ ಡಿ.23ರಂದು ಬೆಂಗಳೂರಿನಲ್ಲಿ ಎಲ್ಲ ಬಣಗಳ ರೈತ ನಾಯಕರು ಮತ್ತು ಮುಖಂಡರ ಬೃಹತ್ ಸಭೆ ಆಯೋಜಿಸಲಾಗಿದೆ. ರೈತ ಸಂಘಗಳು ಒಂದಾದರೆ ಮಾತ್ರ ರೈತರ ಸಮಸ್ಯೆಗಳ ಪರಿಹಾರ ಸಾಧ್ಯವಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದ್ದಾರೆ.
ಮಂಗಳವಾರ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಕರ್ನಾಟಕದ ರೈತ ಸಂಘಗಳ ಏಕೀಕರಣ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ರೈತ ಬಣಗಳು ಒಗ್ಗೂಡಿ ಹೋರಾಟ ಮಾಡಿದರೆ ಸರಕಾರವನ್ನು ಎಚ್ಚರಿಸುವ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಸಾಧ್ಯವಾಗಲಿದೆ ಎಂದರು.
ರೈತ ಸಂಘದ ರೂವಾರಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಕಟ್ಟಿದ ಮೂಲ ರೈತ ಸಂಘ ಒಡೆದು ಶಿವಮೊಗ್ಗ, ರಾಯಚೂರು, ವಿಜಯಪುರ, ಬೆಳಗಾವಿ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ವ್ಯಕ್ತಿಗಳ ಮುಖಂಡತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಸಂಘಗಳಾಗಿ ಹರಿದು ಹಂಚಿ ಹೋಗಿದೆ. ಈ ಎಲ್ಲ ಸಂಘಗಳ ನಾಯಕರು ಮತ್ತು ರಾಜ್ಯಾಧಕ್ಷರ ಜತೆಗೆ ಮಾತುಕತೆ ನಡೆಸಿ, ವೈಮನಸ್ಸುಗಳನ್ನು ತೊರೆದು ಸಮಸ್ತ ರೈತರ, ನಾಡಿ ಹಿತಕ್ಕಾಗಿ ಒಗ್ಗೂಡಿಸಬೇಕಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಶಿವಮೊಗ್ಗದ ರೈತ ಮುಖಂಡ ದಿನೇಶ್ ಶಿರವಾಳ ಮಾತನಾಡಿ, ಪ್ರೊ.ನಂಜುಂಡಸ್ವಾಮಿ ಅವರಿದ್ದಾಗ ಸರಕಾರವೇ ಹೆದರುತ್ತಿತ್ತು. ಅವರು ಒಂದು ಕರೆ ನೀಡಿದರೆ ಇಡೀ ರೈತ ಸಮುದಾಯ ಒಂದೆಡೆ ಸೇರುತ್ತಿತ್ತು. ಆದರೆ, ಬಣ ರಾಜಕೀಯದಿಂದ ಈಗ ರೈತ ಸಂಘಗಳು ಹಲ್ಲಿಲ್ಲದ ಹಾವಿನಂತಾಗಿವೆ. ಹಾಗಾಗಿಯೇ, ಸರಕಾರಗಳು ರೈತರಿಗೆ ಮತ್ತು ರೈತ ಸಂಘಗಳಿಗೆ ಕಿಮ್ಮತ್ತು ನೀಡುತ್ತಿಲ್ಲ ಎಂದರು.
ಸಭೆಯಲ್ಲಿ ರೈತ ನಾಯಕರಾದ ಚನ್ನಪ್ಪ ಪೂಜಾರಿ, ರಾಜೂ ಪವಾರ್, ಮಹೇಶ್ ಸುಬೇದಾರ್, ನಂದಿನಿ ಜಯರಾಂ ಸೇರಿದಂತೆ ಹಲವರು ಇದ್ದರು.
ನಿರ್ಣಯಗಳು :
* ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೆಸರಿನಲ್ಲಿ ಆಗಿರುವ ಎಲ್ಲ ಬಣಗಳನ್ನು ಒಗ್ಗೂಡಿಸುವುದು.
* ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ 1 ಲಕ್ಷ ರೈತರನ್ನು ಸೇರಿಸಿ ಶಕ್ತಿ ಪ್ರದರ್ಶಿಸುವುದು.
* ರೈತ ವಿರೋಧಿ ಕಾಯ್ದೆಗಳ ವಾಪಸ್ಸು ಪಡೆಯಲು ಸರಕಾರವನ್ನು ಒತ್ತಾಯಿಸುವುದು.
* ಕರ್ನಾಟಕದ ರೈತ ಸಂಘಗಳ ಏಕೀಕರಣ ಹಂತ ಹಂತವಾಗಿ ರೂಪಿಸುವುದು, ಬಲಿಷ್ಠಗೊಳಿಸುವುದು.