ಬೆಂಗಳೂರಿನ ರಸ್ತೆಗಳ ಸ್ಥಿತಿ ತಿಳಿಯಲು ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳ ಬಳಕೆ
ಸಾಂದರ್ಭಿಕ ಚಿತ್ರ (Credit: X/@Bbmpcares)
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಸ್ತೆಗಳ ಸ್ಥಿತಿ-ಗತಿಗಳನ್ನು ತಿಳಿದುಕೊಳ್ಳಲು ಕೃತಕ ಬುದ್ಧಿಮತ್ತೆಯ(ಎಐ) ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ 15 ಎಐ ಕ್ಯಾಮೆರಾಗಳನ್ನು ಖರೀದಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸುಮಾರು 1,400 ಕಿ.ಮೀ. ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆ ಜಾಲವಿದ್ದು, ಮಳೆಯಿಂದಾಗಿ ಗುಂಡಿ ಬಿದ್ದು ಹದಗೆಟ್ಟು ಹೋಗಿವೆ. ಭೌತಿಕವಾಗಿ ಎಲ್ಲ ರಸ್ತೆಗಳನ್ನು ಪರಿಶೀಲಿಸುವುದು ಕಷ್ಟವಾಗುತ್ತದೆ. ಹೀಗಾಗಿ ಎಐ ಕ್ಯಾಮೆರಾಗಳ ಮೂಲಕ ರಸ್ತೆ ಗುಂಡಿಗಳು, ಕಸ, ರಸ್ತೆ ಬದಿಯಲ್ಲಿನ ಧೂಳನ್ನು ಗುರುತಿಸಿ ತೆರವು ಮಾಡಲು ಉದ್ದೇಶಿಸಲಾಗಿದೆ ಎಂದರು.
ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ಸ್ಥಿತಿಗತಿ ಅರಿಯಲು ಎಐ ಕ್ಯಾಮೆರಾಗಳನ್ನು 5 ಲಕ್ಷ ರೂ.ಗಳಲ್ಲಿ ಖರೀದಿಸಲಾಗಿದೆ. ಈ ಕ್ಯಾಮೆರಾಗಳನ್ನು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗಳ ವಾಹನಗಳಲ್ಲಿ ಅಳವಡಿಸಲಾಗುವುದು. ಕ್ಯಾಮೆರಾಗಳನ್ನು ಅಳವಡಿಸಿರುವ ವಾಹನಗಳು ಗಂಟೆಗೆ 5 ಕಿ.ಮೀ. ವೇಗದಲ್ಲಿ ಸಂಚರಿಸಿ, ರಸ್ತೆ ಗುಂಡಿಗಳನ್ನು ಸೆರೆ ಹಿಡಿದು ಮಾಹಿತಿ ನೀಡಲಿವೆ ಎಂದರು.
ಪ್ರತಿಯೊಂದು ವಾಹನವು ನಾಲ್ಕೈದು ತಾಸು ಸಂಚರಿಸಲಿದ್ದು, 20 ಕಿ.ಮೀ.ನಷ್ಟು ರಸ್ತೆ ಮಾರ್ಗವನ್ನು ಸ್ಕ್ಯಾನ್ ಮಾಡಲಿವೆ. ಇದರಿಂದ ರಸ್ತೆಗಳ ವಸ್ತುಸ್ಥಿತಿ ತಿಳಿದು, ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಇದರ ಯಶಸ್ಸು ಆಧರಿಸಿ ವಾರ್ಡ್ ರಸ್ತೆಗಳ ಪರಿಶೀಲನೆಗೂ ಎಐ ಕ್ಯಾಮೆರಾಗಳನ್ನು ಬಳಸಲಾಗುವುದು ಎಂದು ಅವರು ಹೇಳಿದರು.