ವ್ಯಾಟಿಕನ್ ಸಿಟಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಸರ್ವಧರ್ಮ ಸಮ್ಮೇಳನಕ್ಕೆ ಯು.ಟಿ.ಖಾದರ್
ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಲಿರುವ ಕರ್ನಾಟಕದ ಮೊದಲ ಸ್ಪೀಕರ್
ಮಂಗಳೂರು : ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ನವೆಂಬರ್ 30 ರಂದು ರೋಮ್ ನ ವ್ಯಾಟಿಕನ್ ಸಿಟಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಾರಾಯಣ ಗುರುಗಳು ಆಯೋಜಿಸಿದ್ದ ಮೊದಲ ಅಂತರಾಷ್ಟ್ರೀಯ ಸರ್ವಧರ್ಮ ಸಮ್ಮೇಳನಕ್ಕೆ ಶತಮಾನೋತ್ಸವ ಸಂದ ಸ್ಮರಣಾರ್ಥ ಈ ಸಮ್ಮೇಳನವನ್ನು ವ್ಯಾಟಿಕನ್ ಸಿಟಿಯ ಆಗಸ್ತಿನ್ಯೇನಮ್ ನಲ್ಲಿ ಆಯೋಜಿಸಲಾಗಿದೆ. "ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು" ಎಂಬ ವಿಷಯದಲ್ಲಿ ನಡೆಯುವ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶ್ವಾದಾದ್ಯಂತ ಇರುವ ವಿವಿಧ ಧರ್ಮಗಳ ಗಣ್ಯರು ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಮುಖ್ಯ ಅತಿಥಿಯಾಗಿ ಭಾಗವಹಿಸುವ ಏಕೈಕ ಗಣ್ಯವ್ಯಕ್ತಿ ಎಂಬ ಹೆಗ್ಗಳಿಕೆಗೆ ಸ್ಪೀಕರ್ ಯು.ಟಿ. ಖಾದರ್ ಪಾತ್ರರಾಗಿದ್ದಾರೆ. ಇದೇ ಸಂದರ್ಭ ಅವರು ವಿಶ್ವ ಕ್ಯಾಥಲಿಕ್ ಸಮುದಾಯದ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ ಸಿಟಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.