ಉತ್ತಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ : ಸ್ಪೀಕರ್ ಯು.ಟಿ.ಖಾದರ್
‘ಬ್ಯಾರಿ ಕೂಟ-2025’ ಸಮಾರೋಪ ಸಮಾರಂಭ

ಬೆಂಗಳೂರು : ಮುಂದಿನ ಪೀಳಿಗೆಗೆ ಉತ್ತಮವಾದ ಸಮಾಜ ನಿರ್ಮಾಣ ಮಾಡಿಕೊಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಪ್ರೀತಿ, ಸಹೋದರತೆಯ ಸಮಾಜ ನಾವು ನಿರ್ಮಾಣ ಮಾಡಬೇಕು. ಸಮಸ್ಯೆಗಳು ಬಂದಾಗ ಸಕಾರಾತ್ಮಕವಾಗಿ ಸ್ವೀಕರಿಸಿ, ಪರಿಹಾರ ಕಂಡುಕೊಳ್ಳುವ ಕೆಲಸ ಮಾಡೋಣ. ಪ್ರೀತಿಯಿಂದ ವಿಶ್ವವನ್ನು ಗೆಲ್ಲಬಹುದು. ದ್ವೇಷದಿಂದ ನಮ್ಮ ಮಕ್ಕಳ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಬುಧವಾರ ನಗರದ ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್‍ನಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ‘ಬ್ಯಾರಿ ಕೂಟ-2025’ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆ ಸರ್ವರನ್ನು ಒಟ್ಟುಗೂಡಿಸುವ ಸಂಘಟನೆಯಾಗಬೇಕೇ ಹೊರತು, ನಮ್ಮಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಸೃಷ್ಟಿಸುವ ಸಂಘಟನೆಯಾಗಬಾರದು. ಅಲ್ಲದೇ, ಸಂಘಟನೆ ಸಕಾರಾತ್ಮಕವಾದ ಚಿಂತನೆಯನ್ನು ಹೊಂದಿರಬೇಕೇ ಹೊರತು, ನಕಾರಾತ್ಮಕ ಚಿಂತನೆಗೆ ಅವಕಾಶ ಇರಬಾರದು ಎಂದು ನಾನು ಶಬ್ಬೀರ್ ಅವರ ತಂಡಕ್ಕೆ ಸಲಹೆ ನೀಡಿದ್ದೆ ಎಂದು ಅವರು ಹೇಳಿದರು.
ನಮ್ಮ ಸಂಸ್ಥೆಯನ್ನು ಸಮಾಜದ ಸರ್ವ ಜಾತಿ, ವರ್ಗದ ಜನರು ಪ್ರೀತಿಸಿ, ಗೌರವಿಸಿ ನಮ್ಮ ಬಳಿ ಬರಬೇಕು. ನಮ್ಮನ್ನು ತಪ್ಪು ದೃಷ್ಟಿಯಿಂದ ನೋಡುವಂತಹ ಯಾವುದೆ ಕೆಲಸ, ಕಾರ್ಯಗಳು ನಮ್ಮಿಂದ ಆಗಬಾರದು. ತುಮಕೂರಿನಲ್ಲಿ ನಡೆದಂತಹ ತ್ರಿವಳಿ ಕೊಲೆ ಘಟನೆಯ ಸಂದರ್ಭದಲ್ಲಿ ಶಬ್ಬೀರ್ ಅವರ ತಂಡ ಮಾಡಿದ ಸಹಾಯವನ್ನು ಯಾರು ಮರೆಯುವಂತಿಲ್ಲ ಎಂದು ಖಾದರ್ ಅವರು ಹೇಳಿದರು.
ಬ್ಯಾರಿಗಳ ಗೌರವದ ದೊಡ್ಡ ಮಟ್ಟದ ಬ್ರ್ಯಾಂಡ್ ಅಂದರೆ ‘ಬ್ಯಾರಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತಾರೆ’ ಎಂಬುದು. ಇವತ್ತು ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇವತ್ತಿನ ಸಮಾವೇಶದ ಮೂಲಕ ಅದನ್ನು ಸಾಧಿಸಿ ತೋರಿಸಿದ್ದಾರೆ. ಈ ಸಮಾವೇಶ ಕೇವಲ ಬೆಂಗಳೂರು ಬ್ಯಾರಿ ಸೆಂಟ್ರಲ್ ಕಮಿಟಿಯ ಸಮಾವೇಶವಲ್ಲ, ಇದು ಇಡೀ ಕರ್ನಾಟಕದ ಬ್ಯಾರಿಗಳ ಪ್ರೀತಿಪೂರಕವಾದ ಒಕ್ಕೂಟದ ಸಭೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಯಾರಿಗಳ ಭಾಷೆ, ಸಂಸ್ಕೃತಿ, ಪರಂಪರೆ, ಪ್ರತಿಭೆ, ಆಚಾರ, ವಿಚಾರಗಳನ್ನು ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಬರಲು ಆಗಿಲ್ಲ. ನಮ್ಮ ಬ್ಯಾರಿ ಸಮುದಾಯದ ಯಾವುದೇ ಕೆಲಸಗಳಿರಲಿ ಅದನ್ನು ಸಚಿವ ಝಮೀರ್ ಅಹ್ಮದ್ ಹಾಗೂ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಆದ್ಯತೆಯ ಮೇರೆಗೆ ಸ್ಪಂದಿಸುತ್ತಾರೆ ಎಂದು ಖಾದರ್ ಅವರು ಹೇಳಿದರು.
ಬ್ಯಾರಿಗಳಿಗೆ ಶ್ರಮಪಟ್ಟು ಹೇಗೆ ಕೆಲಸ ಮಾಡಬೇಕು ಎಂಬುದು ಗೊತ್ತಿದೆ. ಇಂದು ನಮಗೆ ಆತ್ಮವಿಶ್ವಾಸ, ಪ್ರೋತ್ಸಾಹ ಎಲ್ಲ ಕಡೆಯಿಂದಲೂ ಹಂತ ಹಂತವಾಗಿ ಸಿಗುತ್ತಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ಅಗತ್ಯವಿದೆ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಟ್ಟಾಗ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಅವರಿಗೆ ಧಾರ್ಮಿಕ, ಲೌಕಿಕ ಶಿಕ್ಷಣ ನೀಡಿದರೆ ಅವರು ನಿಮ್ಮ ಗೌರವ ಹೆಚ್ಚಿಸುವುದರ ಜೊತೆಗೆ, ಸಮಾಜದ ಗೌರವವನ್ನು ಎತ್ತಿ ಹಿಡಿಯುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ನುಡಿಗಳನ್ನು ಆಡಿದ ಬೆಂಗಳೂರು ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಶಬ್ಬೀರ್ ಅಹ್ಮದ್, ಬೆಂಗಳೂರಿನಲ್ಲಿ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುತ್ತಿರುವ ಬ್ಯಾರಿ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ನಾವು ಈ ಸಂಘಟನೆ ಆರಂಭಿಸಿದೆವು. ಆರಂಭಿಕವಾಗಿ ಐದಾರು ಮಂದಿ ಸೇರಿ ಆರಂಭಿಸಿದ ಈ ಸಂಘಟನೆಯಲ್ಲಿ ಇಂದು ಸುಮಾರು 3 ಸಾವಿರಕ್ಕೂ ಹೆಚ್ಚು ಜನ ಸದಸ್ಯರಿದ್ದಾರೆ ಎಂದು ಹೇಳಿದರು.
ಬ್ಯಾರಿ ಸಮುದಾಯದ ಹಲವಾರು ಸಂಘಟನೆಗಳು ಇವೆ. ಅವುಗಳೆಲ್ಲ ತುಂಬಾ ಚೆನ್ನಾಗಿ ನಡೆಯುತ್ತಿವೆ. ನಾವು ಅವರ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತೇವೆ. ಗಲ್ಫ್ ರಾಷ್ಟ್ರಗಳು ಹೊರತುಪಡಿಸಿ ಬ್ಯಾರಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಆಯ್ಕೆ ಮಾಡುತ್ತಿರುವುದು ಬೆಂಗಳೂರನ್ನು. ಆದುದರಿಂದ, ಇಲ್ಲಿ ಉದ್ಯೋಗ ಹಾಗೂ ತಮ್ಮ ಜೀವನ ರೂಪಿಸಿಕೊಳ್ಳಲು ಬರುವಂತಹ ಯುವಕರಿಗೆ ಅಗತ್ಯ ಸಹಕಾರ, ಮಾರ್ಗದರ್ಶನ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಶಬ್ಬೀರ್ ಅಹ್ಮದ್ ಹೇಳಿದರು.
ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್ ತುಂಬೆ ಮಾತನಾಡಿ, ಬ್ಯಾರಿಗಳು ಸ್ವಾಭಿಮಾನಿ ಹಾಗೂ ವ್ಯಾಪಾರಿ ಮನೋಭಾವನೆಯನ್ನು ಹೊಂದಿರುವವರು. ಸಮುದಾಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅದನ್ನು ಬಗೆಹರಿಸಲು ನಾವು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಸುಳ್ಳು ಪ್ರಕರಣಗಳಲ್ಲಿ ನಮ್ಮ ಅನೇಕ ಸಹೋದರರು ಜೈಲುಗಳಲ್ಲಿ ಇದ್ದಾರೆ. ಇಡೀ ದೇಶದಲ್ಲಿ ಮುಸ್ಲಿಮರು ಸಂಕಷ್ಟದಲ್ಲಿದ್ದಾರೆ. ವಕ್ಫ್ ಆಸ್ತಿಗಳನ್ನು ಕಾನೂನು ಬದ್ಧವಾಗಿ ಲಪಟಾಯಿಸಲು ಪ್ರಯತ್ನ ನಡೆಯುತ್ತಿದೆ. ಇವುಗಳ ವಿರುದ್ಧ ನಾವು ಹೋರಾಟ ಹಾಗೂ ಕಾನೂನು ಸಮರ ಸಾರಬೇಕಿದೆ ಎಂದು ಅವರು ಕರೆ ನೀಡಿದರು.
ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಝುಲ್ಫಿಖಾರ್ ಅಹ್ಮದ್ ಟಿಪ್ಪು ಮಾತನಾಡಿ, ಮಂಗಳೂರಿನಲ್ಲಿ ಈ ಬಾರಿ ಹಜ್ ಕಮಿಟಿ ಉದ್ಘಾಟನೆ ಮಾಡುತ್ತೇವೆ. ಇನಾಯತ್ ಅವರು ಹಜ್ ಭವನ ನಿರ್ಮಾಣಕ್ಕೆ ಎರಡು ಎಕರೆ ಜಾಗ ನೀಡಿದ್ದಾರೆ. ರಮಝಾನ್ ಬಳಿಕ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಶಾಸಕ ಬಿ.ಎ.ಮೊಹಿದ್ದೀನ್ ಬಾವ, ಅಡ್ವೊಕೇಟ್ ಮುಝಫ್ಫರ್ ಅಹ್ಮದ್, ಅಡ್ವೊಕೇಟ್ ಕಮಲ್ ಅಹ್ಮದ್, ನಿವೃತ್ತ ಡಿಸಿಪಿ ಜಿ.ಎ.ಬಾವ ಮಾತನಾಡಿದರು. ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಂಕಜಲ್, ಟಿಕೆ ಗ್ರೂಪ್ ಅಧ್ಯಕ್ಷ ಉಮರ್ ಟಿಕೆ, ಪ್ರಮುಖರಾದ ಝಕರಿಯಾ ಜೋಕಟ್ಟೆ, ಉಮರ್ ಹಾಜಿ, ಸುಹೈಲ್, ಅಬೂಬಕ್ಕರ್, ಆರಿಫ್ ಸೀಮಾ, ಮುಹಮ್ಮದ್ ನಾಸಿರ್, ಹನೀಫ್ ಖಾನ್ ಕೊಡಾಜೆ, ನಾಸಿರ್ ಕೆಂಪಿ, ಇರ್ಷಾದ್ ಬಜಾಲ್, ರಿಫಾಯಿ, ಸಂಶುದ್ದೀನ್, ಸಲೀತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಿದಾ ನಾಸಿರ್ ಕಿರಾತ್ ಪಠಣ ಮಾಡಿದರು. ಅಡ್ವೊಕೇಟ್ ಕಲಂದರ್ ಕೋಯ್ಲಾ ಸ್ವಾಗತಿಸಿದರು. ಮುಹಮ್ಮದ್ ಕಮ್ಮರಬಿ ನಿರೂಪಿಸಿದರು.
ಸರಕಾರಕ್ಕೆ ಬೆಂಗಳೂರು ಬ್ಯಾರಿಸ್ ಸೆಂಟ್ರಲ್ ಕಮಿಟಿ ಮನವಿ :
1. ದಕ್ಷಿಣ ಕನ್ನಡ ಜಿಲ್ಲೆಯ ಮೂಲವನ್ನು ಹೊಂದಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
2. ಅಲ್ಪಸಂಖ್ಯಾತ ಸಮುದಾಯ ಜನಸಂಖ್ಯೆಗೆ ಅನುಗುಣವಾಗಿ 2025-26ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ 10 ಸಾವಿರ ಕೋಟಿ ರೂ.ಗಳ ಅನುದಾನವನ್ನು ಒದಗಿಸಬೇಕು.
3. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳು, ಅಥವಾ ಬೇರೆ ಪರೀಕ್ಷೆಗಳಿಗೆ ಬರುವಂತಹ ಬ್ಯಾರಿ ಸಮುದಾಯದ ವಿದ್ಯಾರ್ಥಿಗಳು ಹಾಸ್ಟೆಲ್ ಅಥವಾ ವಸತಿ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ಆದುದರಿಂದ, ಸರಕಾರ ವಿಶೇಷ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಸ್ಥಳ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು.
4. ರಾಜ್ಯದಲ್ಲಿನ ಮುಸ್ಲಿಮರಲ್ಲಿ ಅಲ್ಪಸಂಖ್ಯಾತರಾಗಿರುವ ಬ್ಯಾರಿ ಸಮುದಾಯವು ಕರಾವಳಿ ಭಾಗದಲ್ಲಿ ಹೆಚ್ಚು ಭಯಭೀತರಾಗಿ ಜೀವಿಸುವಂತಹ ಪರಿಸ್ಥಿತಿಯಿದೆ. ಭಯ ಮುಕ್ತ ಸಮಾಜ ನಿರ್ಮಾಣ ಮಾಡಲು ವಿಶೇಷವಾದ ಕಾನೂನು ರೂಪಿಸಬೇಕು.
5. ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಮುಸ್ಲಿಮ್ ಸಮುದಾಯದ ತೀವ್ರ ವಿರೋಧವಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಅಂಗೀಕಾರವಾಗದಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಜೊತೆಗೆ, ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳನ್ನು ಮುಸ್ಲಿಮ್ ಸಮುದಾಯದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಪೂರಕವಾಗಿ ಸದ್ಭಬಳಕೆ ಮಾಡುವ ನೀತಿಯನ್ನು ರೂಪಿಸಬೇಕು. ಅಲ್ಲದೇ, ಮುಸ್ಲಿಮರ ಸಮಗ್ರ ಕಲ್ಯಾಣಕ್ಕಾಗಿ ಮುಸ್ಲಿಮರ ಸ್ಥಿತಿಗತಿಯ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು.
ನನ್ನನ್ನು ಸ್ಪೀಕರ್ ಮಾಡುವಾಗ ಬಹಳ ಚರ್ಚೆಗಳು ಆಗಿತ್ತು. ಕರಾವಳಿ ಭಾಗದ ಯುವಕರಿಗೆ ಈ ಜವಾಬ್ದಾರಿ ನಿಭಾಯಿಸಲು ಸಾಧ್ಯವೇ? ಸರಿಯಾಗಿ ಕನ್ನಡ ಮಾತನಾಡಲು ಬಾರದ, ಬ್ಯಾರಿ ಹಾಗು ತುಳು ಮಾತನಾಡುವ ತುಳುನಾಡುನವರಿಗೆ ನಿಭಾಯಿಸಲು ಸಾಧ್ಯವೇ? ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಈ ಜವಾಬ್ದಾರಿ ನಿಭಾಯಿಸಲು ಸಾಧ್ಯವೇ? ಅಲ್ಪಸಂಖ್ಯಾತ ಸಮುದಾಯದವರಿಗೆ ನಿಭಾಯಿಸಲು ಸಾಧ್ಯವೇ? ಎಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಯಿತು. ಯಾರು ಸಾಧ್ಯವಿಲ್ಲ ಎಂದು ಭಾವಿಸಿದ್ದರೋ ಅಂತಹವರಿಗೆ ಬ್ಯಾರಿ, ತುಳು ಮಾತನಾಡುವವರು ಜವಾಬ್ದಾರಿ ನಿಭಾಯಿಸಲು ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದೇವೆ. ಬ್ಯಾರಿ ಸಮುದಾಯದಲ್ಲಿ ಇಷ್ಟು ಸಣ್ಣ ವಯಸ್ಸಿನಲ್ಲಿ ದೊಡ್ಡ ಸ್ಥಾನಗಳನ್ನು ನನಗೆ ಸಿಕ್ಕಿದ್ದಕ್ಕೆ ನಿಮ್ಮ ಪ್ರಾರ್ಥನೆ ಕಾರಣ. ನೀವು ನನ್ನ ಮೇಲೆ ಇಟ್ಟಿರುವ ಗೌರವಕ್ಕೆ ಕಪ್ಪು ಚುಕ್ಕೆ ಇಲ್ಲದಂತೆ ಮುಂದುವರೆಯುತ್ತೇನೆ.
ಯು.ಟಿ.ಖಾದರ್, ಸ್ಪೀಕರ್
"2024ರ ಅಂಕಿ ಅಂಶಗಳ ಪ್ರಕಾರ ಇಡೀ ರಾಜ್ಯದ 31 ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿ ಡ್ರಗ್ಸ್ ಗೆ ಸಂಬಂಧಿಸಿದ ಶೇ.30ರಷ್ಟು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಶೇ.85ರಷ್ಟು ಪ್ರಕರಣಗಳು ಒಂದು ಸಮುದಾಯದ ಯುವಕರ ವಿರುದ್ಧವಿದೆ. ಆದುದರಿಂದ, ನಮ್ಮ ಸಮುದಾಯ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಮುಂದಿನ ನಮ್ಮ ಪೀಳಿಗೆಯನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ರೂಪಿಸಬೇಕಿದೆ"
ಅಡ್ವೊಕೇಟ್ ಲತೀಫ್, ಲೋಕಾಯುಕ್ತ ಎಸ್‍ಪಿಪಿ
ಸಾಧಕರಿಗೆ ಸನ್ಮಾನ: ಯಾಸಿರ್ ಕಲ್ಲಡ್ಕ, ಡಾ.ಉಮರ್ ಹಾಜಿ, ಯಾಕೂಬ್ ಮಾಸ್ಟರ್, ಮುಹಮ್ಮದ್ ಬಡ್ಡೂರ್, ಮುಹಮ್ಮದ್ ಶಾಮಿಲ್ ಅರ್ಶದ್, ಪಿ.ಎಂ.ಅಶ್ರಫ್, ಫಾತಿಮಾ ನಝಾಫ್, ಆಯಿಷಾ ಝೋಹರಾ ಅವರಿಗೆ ಸನ್ಮಾನ ಮಾಡಲಾಯಿತು.