ಮುಸ್ಲಿಂ ಸಮುದಾಯಕ್ಕೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರ ವಕ್ಫ್ ಅಧಿಕಾರಿಗಳಿಗೆ ನೀಡುವಂತೆ ಸಿಎಂಗೆ ಸ್ಪೀಕರ್ ಯು.ಟಿ.ಖಾದರ್ ಪತ್ರ

ಬೆಂಗಳೂರು: ಮುಸ್ಲಿಂ ಸಮುದಾಯಕ್ಕೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಅಧಿಕಾರ ನೀಡಲು ಸೂಕ್ತ ಅಧಿಸೂಚನೆ ಹೊರಡಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಯುಟಿ ಖಾದರ್, ರಾಜ್ಯದಲ್ಲಿ ಮುಸ್ಲಿಂ ಸಮಾಜದ ಧಾರ್ಮಿಕ ವಿಧಿ ವಿಧಾನದಂತೆ ವಿವಾಹ ನಡೆದಿರುವ ಬಗ್ಗೆ ಮಸೀದಿ, ಧರ್ಮಗುರುಗಳು ನೀಡುವ ಪ್ರಮಾಣ ಪತ್ರವನ್ನು ವಕ್ಫ್ ಮಂಡಳಿಯು ದೃಢಿಕರಿಸಿ, ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಸರಕಾರದ ಪರವಾಗಿ ನೀಡುತ್ತಿತ್ತು ಎಂದಿದ್ದಾರೆ.
ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಹೊರಡಿಸಿರುವ ಆದೇಶದಂತೆ ವಕ್ಫ್ ಮಂಡಳಿಗೆ ವಿವಾಹ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ನೀಡಲಾಗಿತ್ತು. ಆದರೆ ಈ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿಗಳ ಪೀಠ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ವಿವಾಹ ನೋಂದಣಿ ಪ್ರಮಾಣ ಪತ್ರ ಲಭಿಸದೆ ತೊಂದರೆಗೊಳಗಾಗಿದ್ದಾರೆ. ಇದಲ್ಲದೆ ಈ ಕುರಿತ ವಿಚಾರಣೆಯನ್ನು ನ್ಯಾಯ ಪೀಠವು ಮಾ.16ಕ್ಕೆ ಮುಂದೂಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನ್ಯಾಯಾಲಯದ ತಡೆಯಾಜ್ಞೆಯಿಂದ ಪ್ರಸ್ತುತ ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲು ಯಾವುದೇ ಪ್ರಾಧಿಕಾರಕ್ಕೆ ಅಧಿಕಾರ ಇರುವುದಿಲ್ಲ. ಆದ್ದರಿಂದ ರಾಜ್ಯದಲ್ಲಿ ಜಾರಿಯಲ್ಲಿರುವ The Karnataka Marriage (Registration and Miscellaneous Provisions) act 1976ರ ಅಡಿಯಲ್ಲಿ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಅಧಿಕಾರ ನೀಡಲು ಸೂಕ್ತ ಅಧಿಸೂಚನೆ ಹೊರಡಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.