ಮಂಗಳೂರಿನಲ್ಲಿ ನ್ಯಾಷನಲ್ ಲಾ ಸ್ಕೂಲ್ ಸ್ಥಾಪಿಸಿ: ವೀರಪ್ಪ ಮೊಯ್ಲಿ

ಬೆಂಗಳೂರು : ಕೆಲವು ರಾಜ್ಯಗಳಲ್ಲಿ ಎರಡೆರಡು ನ್ಯಾಷನಲ್ ಲಾ ಸ್ಕೂಲ್ ಇವೆ. ಆದರೆ, ರಾಜ್ಯದಲ್ಲಿ ಒಂದೇ ಒಂದು ನ್ಯಾಷನಲ್ ಲಾ ಸ್ಕೂಲ್ ಇದೆ. ಹೀಗಾಗಿ ಮಂಗಳೂರಿನಲ್ಲಿ ಒಂದು ನ್ಯಾಷನಲ್ ಲಾ ಸ್ಕೂಲ್ ಅನ್ನು ಸ್ಥಾಪನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ಕೆ.ಎಚ್.ಪಾಟೀಲರ ಜನ್ಮ ಶತಮಾನೋತ್ಸವ ಆಚಾರಣೆ ಮತ್ತು ಕೆ.ಎಚ್.ಪಾಟೀಲ ಸ್ಕೂಲ್ ಆಫ್ ಲಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಗುಣಮಟ್ಟದ ಕಾನೂನು ಶಾಲೆಗಳು ಅವಶ್ಯಕವಾಗಿವೆ. ಸಾಂಪ್ರದಾಯಿಕ ಕಾನೂನು ಕಾಲೇಜು ಆಗಬಾರದು. ಎಐ, ಟೆಕ್ನಾಲಜಿ ಅಳವಡಿಕೆ ಕಾನೂನು ಕಾಲೇಜಿನಲ್ಲಿ ಆಗಬೇಕಿದೆ. ಕೆ.ಎಚ್.ಪಾಟೀಲ್ ಸ್ಕೂಲ್ ಆಫ್ ಲಾ ದೊಡ್ಡ ಹೆಸರು ಮಾಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಕೆಲಸ ಇಲ್ಲದೇ ಇದ್ದರೆ ಲಾ ಕಾಲೇಜು ಎಂಬ ಭಾವನೆ ಹಿಂದೆ ಇತ್ತು. 26 ನ್ಯಾಷನಲ್ ಲಾ ಸ್ಕೂಲ್ ಇವೆ. ಐಐಟಿ ಐಐಎಂ ಸಮಾನ ಅರ್ಹತೆ ಪಡೆದಿವೆ. ಆದರೂ 28 ಸುಪ್ರೀಂ ನ್ಯಾಯಾಧೀಶರಲ್ಲಿ ಒಬ್ಬ ಮಹಿಳೆಯೂ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ನ್ಯಾಯಾಧೀಶರ ನೇರ ನೇಮಕ ಆಗಬೇಕು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಬೇಕು. ಆಗ ಸಾಮಾಜಿಕ ನ್ಯಾಯ ಸಿಗುತ್ತದೆ. ಪ್ರಗತಿಪರ ಯೋಚನೆಯಿಂದ ಕೆ.ಎಚ್.ಪಾಟೀಲ್ ಸ್ಕೂಲ್ ಆಫ್ ಲಾ ಆರಂಭವಾಗಿದೆ. ರಾಷ್ಟ್ರ ಮಟ್ಟದ ಉನ್ನತ ಕಾಲೇಜು ಆಗಿ ಬೆಳಗಲಿ ಎಂದು ಅವರು ಹೇಳಿದರು.
ಕೆ.ಎಚ್.ಪಾಟೀಲರ ಜತೆ 20-25 ವರ್ಷ ನಿಕಟ ಸಂಬಂಧವಿತ್ತು. ಅವರು ಸ್ನೇಹಮಯಿ, ಶ್ರೇಷ್ಠ ಇಚ್ಚಾಶಕ್ತಿಯುಳ್ಳ ಧೀಮಂತ ನಾಯಕರಾಗಿದ್ದು, ಪಂಚಾಯಿತಿ ಅಧ್ಯಕ್ಷರಾಗಿ ಗದಗ ವಾತಾವರಣವನ್ನೇ ಬದಲು ಮಾಡಿದರು. ಅವರೊಬ್ಬ ದಾರ್ಶನಿಕ ಧುರೀಣರಾಗಿದ್ದರು. ನಿಷ್ಠೂರವಾದಿ ಆಗಿದ್ದರು ಎಂದು ವೀರಪ್ಪ ಮೊಯ್ಲಿ ಹೇಳಿದರು.
ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನನಗೆ ಕೆ.ಎಚ್.ಪಾಟೀಲರು ಮಾದರಿಯಾಗಿದ್ದು, ಡಿಆರ್, ಎಚ್.ಕೆ ಅವರಂತೆಯೇ ನಾನೂ ಅವರಿಗೆ ಮಗನಂತಿದ್ದೆ. ಹುಲಕೋಟಿ ಹೆಸರು ರಾಷ್ಟ್ರ ಮಟ್ಟದಲ್ಲಿ ಹೆಸರಾಗಲು ಕೆ.ಎಚ್.ಪಾಟೀಲರು ಕಾರಣ ಎಂದು ಹೇಳಿದರು.
ಎಚ್.ಕೆ.ಪಾಟೀಲ, ಡಿ.ಆರ್.ಪಾಟೀಲರು ತಂದೆ ಮಾರ್ಗದಲ್ಲಿ ನಡೆದು ಅವರ ಹೆಸರು ಉಳಿಸಿದ್ದಾರೆ. ಕೆ.ಎಚ್.ಪಾಟೀಲರ ಎಲ್ಲ ಯೋಜನೆ ಸಾಕಾರಗೊಳಿಸಿದ್ದಾರೆ. ಅವರು ಶ್ರೇಷ್ಠ ನಾಯಕರು. ನಾಡು ಕಂಡ ಶ್ರೇಷ್ಠ ರಾಜಕಾರಣಿ. ಅವರ ಹೆಜ್ಜೆ ಗುರುತಲ್ಲಿ ನಾವೂ ನಡೆಯೋಣ ಎಂದು ಅವರು ತಿಳಿಸಿದರು.
ಇದೇ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಎಂ. ವೆಂಕಟಾಚಲಯ್ಯ ಸೇರಿದಂತೆ ಮತ್ತಿತರರು ಇದ್ದರು.