ಹಿರಿಯ ಚಿತ್ರನಟ ಬ್ಯಾಂಕ್ ಜನಾರ್ದನ್ ಇನ್ನಿಲ್ಲ

ಬೆಂಗಳೂರು : ಹಿರಿಯ ಚಿತ್ರನಟ ಬ್ಯಾಂಕ್ ಜನಾರ್ಧನ್(76) ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.
ಬ್ಯಾಂಕ್ ಜನಾರ್ಧನ್ ಅವರ ಮೃತದೇಹವನ್ನು ನಗರದ ಸುಲ್ತಾನ್ ಪಾಳ್ಯದಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸಂಜೆ 4ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಬ್ಯಾಂಕ್ ಜನಾರ್ಧನ್ ಪುತ್ರ ಗುರುಪ್ರಸಾದ್ ತಿಳಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ಧನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಂಚ ಚೇತರಿಸಿಕೊಂಡ ಬಳಿಕ ಮನೆಗೆ ಕರೆತರಲಾಗಿತ್ತು. ಮೂರು ದಿನಗಳ ಹಿಂದಷ್ಟೇ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ಪುತ್ರ ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ಸಮೀಪದ ಹೊಳಲ್ಕೆರೆಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಜನಾರ್ಧನ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. 1985ರಲ್ಲಿ ‘ಪಿತಾಮಹ' ಎಂಬ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು. ಉಪೇಂದ್ರ ನಿರ್ದೇಶನದ ‘ಶ್’, 'ತರ್ಲೆ ನನ್‍ಮಗ' ಹಾಗೂ ‘ಗಣೇಶ ಸುಬ್ರಹ್ಮಣ್ಯ', ‘ಜಿಪುಣ ನನ್ನ ಗಂಡ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ತಮ್ಮ ಹಾಸ್ಯಮಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು.
ಸುಮಾರು 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅವರು, 80, 90ರ ದಶಕದ ಬಹುಬೇಡಿಕೆಯ ಹಾಸ್ಯನಟರಲ್ಲಿ ಒಬ್ಬರಾಗಿದ್ದರು. ಒಟ್ಟಾರೆ ಬ್ಯಾಂಕ್ ಜನಾರ್ಧನ್ ಅವರು 500ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಬ್ಯಾಂಕ್ ಜನಾರ್ಧನ್ ಅವರ ನಿಧನಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ನಟರಾದ ಉಪೇಂದ್ರ, ಶರಣ್, ಜಗ್ಗೇಶ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.