ಬಿಎಸ್‍ವೈ ಮಗ ಅನ್ನಿಸಿಕೊಳ್ಳುವುದಕ್ಕಿಂಲೂ ಬಿಜೆಪಿ ಕಾರ್ಯಕರ್ತ ಆಗಿರುವುದಕ್ಕೆ ಹೆಚ್ಚು ಹೆಮ್ಮೆಯಿದೆ: ವಿಜಯೇಂದ್ರ
ಬೆಂಗಳೂರು: ನನಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಗ ಅನ್ನಿಸಿಕೊಳ್ಳಲು ಹಾಗೂ ಬಿಜೆಪಿ ಅಧ್ಯಕ್ಷ ಆಗಿರುವುದಕ್ಕೆ ಹೆಮ್ಮೆ ಇದೆ. ಅದಕ್ಕಿಂತಲೂ ಹೆಚ್ಚಾಗಿ ನಾನೊಬ್ಬ ಬಿಜೆಪಿ ಕಾರ್ಯಕರ್ತ ಆಗಿರುವುದಕ್ಕೆ ಹೆಮ್ಮೆ ಇದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ರವಿವಾರ ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನನ್ನೂ ಸೇರಿ ಯಾರೂ ಪಕ್ಷದ ಕಾರ್ಯಕರ್ತರಿಗೆ ಅಪಮಾನ ಮಾಡಬಾರದು. ಎಲ್ಲರೂ ಒಟ್ಟಾಗಿ ಕಾರ್ಯಕರ್ತರ ಪರವಾಗಿ ನಿಲ್ಲೋಣ ಎಂದರು.
ಈ ಸರಕಾರ ಅತ್ಯಂತ ಭ್ರಷ್ಟವಾಗಿದೆ. ಅಹಿಂದ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಈಗ ಹಿಂದೂಗಳ ಕೈಬಿಟ್ಟಿದ್ದಾರೆ. ಈ ಭ್ರಷ್ಟ ಕಾಂಗ್ರೆಸ್ ಸರಕಾರ ತೊಲಗಿಸುವ ಸಂಕಲ್ಪ ಮಾಡೋಣ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿ ಪಕ್ಷ ನನ್ನನ್ನು ಚೆನ್ನಾಗಿ ನಡೆಸಿಕೊಂಡಿದೆ. ಉತ್ತಮ ಸ್ಥಾನಮಾನ ಕೊಟ್ಟಿದೆ. ಕೆಲವರು ಇದರ ಬಗ್ಗೆಯೂ ಮಾತನಾಡುತ್ತಾರೆ. ಬಿಜೆಪಿಯನ್ನು ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು ಟೀಕಿಸಲ್ಲ. ಆದರೆ ಬಿಜೆಪಿಯನ್ನು ಹಿಂದೂಗಳೇ ಟೀಕಿಸುತ್ತಾರೆ ಎಂದರು.
ಬಿಜೆಪಿಗೆ ಬೈಯ್ಯುವವರು ನಮ್ಮವರೇ..!
ಬಿಜೆಪಿಗೆ ಬೈಯ್ಯುವವರು ಬೇರ್ಯಾರು ಅಲ್ಲ. ನಮ್ಮವರೇ ನಮಗೆ ಬಯ್ಯೋದು, ಟೀಕಿಸುವುದು. ನಮ್ಮ ನಾಯಕರೆಲ್ಲ ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ. ಆದರೂ ಹೊಂದಾಣಿಕೆ ರಾಜಕಾರಣ ಎಂದು ಆರೋಪ ಮಾಡುತ್ತಾರೆ. ಎಲ್ಲಿ ಅಡ್ಜೆಸ್ಟ್ ಮೆಂಟ್ ಮಾಡುತ್ತಿದ್ದಾರೆ?, ನಿಮಗೆ ಧೈರ್ಯ ಇದ್ದರೆ ಮುಂದೆ ಬಂದು ಹೇಳಿ. ನಾವು ತಪ್ಪಿದ್ದರೆ ತಿದ್ದಿಕೊಳ್ಳುತ್ತೇವೆ. ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಬೇಡಿ ಎಂದು ಛಲವಾದಿ ನಾರಾಯಣಸ್ವಾಮಿ ಮನವಿ ಮಾಡಿದರು.