ಈಡಿ ದಾಳಿ ಪ್ರಕರಣ | ಕಿರುಕುಳ ಕೊಡುವುದಕ್ಕೂ ಒಂದು ಮಿತಿಯಿರಬೇಕು : ವಿನಯ್ ಕುಲಕರ್ಣಿ ಬೇಸರ

ಬೆಂಗಳೂರು: ಪಕ್ಷ ಯಾವುದೇ ಇರಲಿ, ಓರ್ವ ಮನುಷ್ಯನಿಗೆ ಕಿರುಕುಳ ಕೊಡುವುದಕ್ಕೂ ಒಂದು ಮಿತಿಯಿರಬೇಕು. ಅಧಿಕಾರವಿದೆ ಎಂದು ಈ ರೀತಿ ಬಳಸಿಕೊಳ್ಳುತ್ತಿರುವುದು ನಿಜವಾಗಿಯೂ ನೋವಿನ ಸಂಗತಿ ಎಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಈಡಿ ದಾಳಿ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದಾಳಿಯ ಹಿಂದೆ ಕಾಣದ ಕೈಗಳಿದ್ದು, ನನ್ನ ಮೇಲೆ ಯಾವ್ಯಾವ ಪ್ರಕರಣ ದಾಖಲಿಸಬಹುದೋ, ಎಲ್ಲವನ್ನೂ ದಾಖಲಿಸಿ ಮುಗಿಸಿದ್ದಾರೆ. ಇದೂ ಸಹ ಒಂದು ರಾಜಕೀಯ ಷಡ್ಯಂತ್ರ ಎಂದು ಹೇಳಿದರು.
ಈಡಿ ಅಧಿಕಾರಿಗಳು ಬರೋದು ಒಂದಕ್ಕೆ, ಪರಿಶೀಲನೆ ಮಾಡುವುದು ಇನ್ನೊಂದು. ನನ್ನ ವಿರುದ್ಧದ ಷಡ್ಯಂತ್ರ ಇಂದು, ನಿನ್ನೆಯದ್ದಲ್ಲ. ನಾನೋರ್ವ ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಜನರನ್ನು ಭೇಟಿಯಾಗಲು ಆಗುತ್ತಿಲ್ಲ ಎಂದ ಅವರು, ಐಶ್ವರ್ಯಾ ಗೌಡ ಜೊತೆ ನನ್ನ ಯಾವ ವ್ಯವಹಾರವೂ ಇಲ್ಲ, ಹಣದ ವರ್ಗಾವಣೆಯೂ ಆಗಿಲ್ಲ. ಮಂಜುಳಾ ಪಾಟೀಲ್ ಮತ್ತು ಐಶ್ವರ್ಯಾ ಗೌಡ ನಡುವೆ ನಾನು ರಾಜಿ ಸಂಧಾನ ಮಾಡಿಸಿಲ್ಲ ಎಂದು ತಿಳಿಸಿದರು.