ಬೆಂಗಳೂರು| ಸಂಚಾರ ನಿಯಮ ಉಲ್ಲಂಘನೆ: ಶಾಲಾ, ಖಾಸಗಿ ವಾಹನಗಳ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ನಿಗದಿತ ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಶಾಲಾ ಹಾಗೂ ಖಾಸಗಿ ವಾಹನಗಳ ವಿರುದ್ಧ ನಗರದ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿರುವುದು ವರದಿಯಾಗಿದೆ.
ಶಾಲಾ ವಾಹನಗಳಲ್ಲಿ ನಿಗದಿ ಮಾಡಿದ ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ವಾಹನಗಳಲ್ಲಿ ಚಾಲಕರು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆ, ನಗರ ಸಂಚಾರ ಪೊಲೀಸರು ಉಪ್ಪಾರಪೇಟೆ, ಹೈಗ್ರೌಂಡ್ಸ್, ಮಲ್ಲೇಶ್ವರ, ಶೇಷಾದ್ರಿಪುರ, ರಿಚ್‍ಮಂಡ್ ವೃತ್ತ, ಅಶೋಕ ನಗರ, ಹಲಸೂರು, ಯಶವಂತಪುರ ಸೇರಿದಂತೆ ಹಲವು ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಸಂಚಾರ ಪೊಲೀಸರು ನಗರದಾದ್ಯಂತ 2050 ಶಾಲಾ ವಾಹನಗಳನ್ನು ತಪಾಸಣೆ ನಡೆಸಿದ್ದು, ಈ ಪೈಕಿ 994 ಶಾಲಾ ವಾಹನ, 319 ಬಸ್‍ಗಳು, 122 ಆಟೋ, 133 ಓಮ್ನಿಕಾರು, 332 ವ್ಯಾನ್ ಹಾಗೂ ಇತರೆ 88 ವಾಹನಗಳ ಮೇಲೆ ಭಾರತೀಯ ಮೋಟಾರು ವಾಹನ ಕಾಯ್ದೆ 177ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದುಪ್ಪಟ್ಟು ಹಣದ ಆಸೆಗಾಗಿ ಚಾಲಕರು ಹೆಚ್ಚಿನ ಮಕ್ಕಳನ್ನು ವಾಹನಗಳಲ್ಲಿ ತುಂಬಿಕೊಂಡು ಸಂಚರಿಸುತ್ತಾರೆ. ವಾಹನ ಅಪಘಾತವಾದಾಗ ಮಕ್ಕಳು ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಮಕ್ಕಳನ್ನು ವಾಹನದಲ್ಲಿ ತುಂಬಿಕೊಂಡಿರುತ್ತಾರೆ. ಈ ಬಗ್ಗೆ ಚಾಲಕರ ಗಮನಕ್ಕೆ ತಂದು ಎಚ್ಚರಿಕೆ ನೀಡಿದರೂ ಕೂಡ ನಿಯಮ ಪಾಲನೆಯಾಗಿಲ್ಲ. ಆದುದರಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.