ವಕ್ಫ್ ವಿವಾದ | ಸಿಎಂ, ಡಿಸಿಎಂ ಮನೆಗಳಿಗೆ ರೈತರು ನುಗ್ಗುವ ದಿನಗಳು ದೂರವಿಲ್ಲ ಎಂದ ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ‘ವಕ್ಫ್ ಆಸ್ತಿ ವಿವಾದವನ್ನು ರಾಜ್ಯ ಕಾಂಗ್ರೆಸ್ ಸರಕಾರ ಆದಷ್ಟು ಬೇಗ ಸರಿ ಮಾಡದಿದ್ದರೆ ರೈತರೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಮನೆಗಳಿಗೆ ನುಗ್ಗುವ ದಿನಗಳು ದೂರವಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ
ಸೋಮವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಎಷ್ಟು ದಿನ ಜನರಿಗೆ ಹೀಗೆ ಮೋಸ ಮಾಡುತ್ತೀರಾ? ಒಂದು ಸಮುದಾಯವನ್ನು ಚಿವುಟುತ್ತೀರಾ? ಮತ್ತೊಂದು ಸಮುದಾಯದ ತೊಟ್ಟಿಲು ತೂಗುತ್ತಿರಾ? ಜನರಲ್ಲಿ ಕ್ಷಮೆ ಕೇಳಿ ಸರಿ ಮಾಡಿಕೊಳ್ಳಿ. ಇಲ್ಲವಾದರೆ ಜನರೇ ನಿಮ್ಮ ಮನೆಗಳಿಗೆ ನುಗ್ಗುವ ಕಾಲ ದೂರವಿಲ್ಲ. ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ’ ಎಂದು ಸಲಹೆ ನೀಡಿದರು.
‘ನಾನು ಸಿಎಂ ಆಗಿದ್ದ ಅವಧಿಯಲ್ಲಿ ನನ್ನ ಮುಂದೆ ಯಾವುದೇ ವಕ್ಫ್ ಕಡತ ಬಂದಿರಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಕಾಲದಲ್ಲೂ ವಕ್ಫ್ ತೀರ್ಮಾನ ಆಗಿದೆ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬೇಜಬ್ದಾರಿತನದ್ದು’ ಎಂದು ಕುಮಾರಸ್ವಾಮಿ ಕಿಡಿಕಾರಿದರು.
‘ರೈತರ ಭೂಮಿಯಾಗಲಿ, ಮಠದ ಭೂಮಿಯಾಗಲಿ, ರಾಮನಗರದ ಗುಡ್ಡಬೆಟ್ಟವನ್ನು ವಕ್ಫ್ಗೆ ನೀಡಲು ಯಾವುದೇ ಕಡತ ನನ್ನ ಬಳಿ ಬಂದಿರಲಿಲ್ಲ. ಯಾವ ದೃಷ್ಟಿಯಿಂದ ಸಿಎಂ ಹೇಳಿದ್ದಾರೋ ಗೊತ್ತಿಲ್ಲ. ಮಾಡಿರುವ ತಪ್ಪನ್ನು ಬೇರೆಯವರ ಮೇಲೆ ಹೊರೆಸಬೇಡಿ. ಒಂದು ವೇಳೆ ನಮ್ಮ ತಪ್ಪಿದ್ದರೆ ಜನರ ಮುಂದೆ ಇಡಿ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
‘ಒಂದು ವೇಳೆ ನನ್ನ ಕಾಲದಲ್ಲಿ ವಕ್ಫ್ ವಿಚಾರಕ್ಕೆ ಸಂಬಂಧಿಸಿ ಏನಾದರೂ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಕಂದಾಯ ಸಚಿವರಾಗಿದ್ದವರು ಕೃಷ್ಣಭೈರೇಗೌಡ, ವಕ್ಫ್ ಮಂತ್ರಿ ಆಗಿದ್ದವರು ಈಗಿನ ವಕ್ಫ್ ಸಚಿವರೇ. ನನ್ನ ಗಮನಕ್ಕೆ ಬಾರದೆ ಅವರು ಮಾಡಿದ್ದರೆ ಅದಕ್ಕೂ ನಮಗೂ ಸಂಬಂಧ ಇಲ್ಲ. ನಾನು ಯಾವುದೇ ಕಾನೂನು ಬಾಹಿರ ಕೃತ್ಯಕ್ಕೆ ಅವಕಾಶ ಕೊಟ್ಟಿಲ್ಲ. ಇಂತಹ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
‘ವಿನಾಕಾರಣ ನನ್ನನ್ನು ಎಳೆಯುವುದಾದರೆ ಅದನ್ನು ಎದುರಿಸಲು ನಾನು ಸಿದ್ದನಿದ್ದೇನೆ. ಪಲಾಯನ ಮಾಡುವುದಿಲ್ಲ. ಸಿಎಂ ಆದವರು ಸುಳ್ಳು ಹೇಳಬಾರದು. ಸತ್ಯ ಹರಿಶ್ಚಂದ್ರನಂತೆ ‘ಸತ್ಯಮೇವ ಜಯತೇ' ಜಪ ಮಾಡುತ್ತಾ…ದಿನವೂ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಸಿಎಂ ಆಗಿ ಜವಾಬ್ದಾರಿಯಿಂದ ಮಾತಾಡಬೇಕು. ಕಾಂಗ್ರೆಸ್ ಜನರನ್ನು ಧರ್ಮ, ಜಾತಿ ಹೆಸರಿನಲ್ಲಿ ಒಡೆದು ಅಳುತ್ತಿದೆʼ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.