ಪ್ರಾಸಿಕ್ಯೂಷನ್‍ಗೆ ಅನುಮತಿ ಖಂಡಿಸಿ ಆ.22ಕ್ಕೆ ‘ರಾಜಭವನ ಚಲೋ’ : ವಾಟಾಳ್ ನಾಗರಾಜ್

ಬೆಂಗಳೂರು : ಸಿಎಂ ಸಿದ್ದರಾಮಯ್ಯರ ವಿರುದ್ಧ ಷಡ್ಯಂತ್ರ ರಾಜಕಾರಣ ಮಾಡುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಮತ್ತು ರಾಜ್ಯಪಾಲ ಹೊರಡಿಸಿರುವ ಪ್ರಾಸ್ತಿಕ್ಯೂಷನ್ ಕೂಡಲೆ ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಆ.22ರಂದು ಕನ್ನಡ ಒಕ್ಕೂಟದ ವತಿಯಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರ ವಿರುದ್ಧ ವಿಚಾರಣೆಗೆ ಆದೇಶ ನೀಡಿವಂತೆ ಮಾಡಿರುವುದರ ಹಿಂದೆ ಪ್ರಧಾನಿ ಮೋದಿಯ ಕೈವಾಡವಿದೆ. ಮೋದಿಯ ಒತ್ತಡ ಇಲ್ಲದೆ ಇದು ನಡೆದಿಲ್ಲ. ಇದೆಲ್ಲದರ ಸೂತ್ರ ದಾರಿ ಮೋದಿಯಾಗಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಮೇಲೆ ಗಂಭೀರ ಆರೋಪ ಮಾಡಬೇಕಾದರೆ, ಸಿಐಡಿ, ಲೋಕಾಯುಕ್ತ ಸಂಸ್ಥೆಗಳಲ್ಲಿ ದೂರು ದಾಖಲಾಗಿರಬೇಕು. ಆದರೆ, ಏಕಾಏಕಿ ರಾಜ್ಯಪಾಲರು ದುರುದ್ದೇಶದಿಂದ ಗೊತ್ತು-ಗುರಿ ಇಲ್ಲದ ವ್ಯಕ್ತಿ ದೂರು ಕೊಟ್ಟಾಗ ಪ್ರಕರಣಕ್ಕೆ ಸ್ಪಂದಿಸಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಸಿಎಂ ಮೇಲೆ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದು ಹುನ್ನಾರದ ಪ್ರತಿಬಿಂಬ. ಇದು ಕೇಂದ್ರ-ರಾಜ್ಯದ ಬಿಜೆಪಿ ಮುಖಂಡರ ಕುತಂತ್ರದ ಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳಂಕ ರಹಿತವಾಗಿ ಆಡಳಿತ ಕೊಟ್ಟಿದ್ದಾರೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ದುರುದ್ದೇಶವೆ ಹೊರತು ಬೇರೇನೂ ಇಲ್ಲ. ರಾಜ್ಯಪಾಲರು ಮುಖ್ಯಮಂತ್ರಿಗೆ ನೋಟೀಸ್ ಕೊಡುವ ಅಧಿಕಾರ ಇರಬಾರದು. ಈ ಬಗ್ಗೆ ಪ್ರಜಾಪ್ರಭುತ್ವ ಉಳಿಸಿಲು ರಾಜ್ಯಾದ್ಯಂತ ಚಳವಳಿ ನಡೆಸಲು ತೀರ್ಮಾನಿಸಿದ್ದೇವೆ. ಕೂಡಲೆ ರಾಜ್ಯಪಾಲರು ರಾಜ್ಯವನ್ನು ಬಿಟ್ಟು ತೊಲಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಎಚ್.ವಿ.ಗಿರೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.