ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ ಬಳಿಕ ಮಂಡ್ಯ ಸಂಸದೆ ಸುಮಲತಾ ಹೇಳಿದ್ದೇನು?
Photo: x/@BYVijayendra
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಬೆಂಬಲ ಹಾಗೂ ಮಂಡ್ಯದಿಂದ ಸ್ಪರ್ಧೆ ವಿಚಾರ ಸಂಬಂಧ ಇಂದು(ಮಾ.30) ಮಂಡ್ಯದಲ್ಲಿಯೇ ಅಂತಿಮ ತೀರ್ಮಾನ ಪ್ರಕಟಿಸುವೆ ಎಂದು ಹಾಲಿ ಸಂಸದೆ ಸಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಧರ್ಮ ಪಾಲನೆ ಪ್ರಚಾರಕ್ಕೆ ಬರುವಂತೆ ಸೂಚಿಸಲಾಗಿದೆ. ಆದರೆ, ಸದ್ಯಕ್ಕೆ ಯಾವುದೇ ನಿರ್ಧಾರ ಹೇಳಿಲ್ಲ. ಬದಲಾಗಿ, ಬೆಂಬಲಗರ ಅಭಿಪ್ರಾಯ ಕೇಳಿ ಮಂಡ್ಯದಲ್ಲಿ ತಮ್ಮ ನಿಲುವು ಪ್ರಕಟಿಸುವುದಾಗಿ ತಿಳಿಸಿದರು.
ಮಂಡ್ಯ ಕ್ಷೇತ್ರ ಬಿಟ್ಟು ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳಬೇಕಿತ್ತು. ಮಾರ್ಚ್ 30 ಮಂಡ್ಯದಲ್ಲಿ ನಾನು ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದೇನೆ. ನನ್ನ ನಿಲುವನ್ನು ಮಂಡ್ಯದಲ್ಲೇ ತಿಳಿಸಲು ಇಷ್ಟಪಡುತ್ತೇನೆ ಎಂದು ಅವರು ನುಡಿದರು.
ವಿಜೇಯಂದ್ರ ಭೇಟಿ: ಬೆಂಗಳೂರಿನ ಜೆಪಿ ನಗರದಲ್ಲಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಸುಮಲತಾ ಜೊತೆ ಸುಮಾರು 1ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ವಿಜಯೇಂದ್ರ, ‘ಮಂಡ್ಯ ಸಂಸದೆ ಸುಮಲತಾ ಜೊತೆ ಒಳ್ಳೆಯ ಚರ್ಚೆ ಆಗಿದ್ದು, ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ. ಸುಮಲತಾ ಅಂಬರೀಶ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಒಳ್ಳೆ ನಿರ್ಧಾರ ಮಾಡುತ್ತಾರೆಂಬ ವಿಶ್ವಾಸವಿದೆ’ ಎಂದು ಹೇಳಿದರು.