ಸಿ.ಟಿ.ರವಿ ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೋ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು : ಬಸವರಾಜ ಬೊಮ್ಮಾಯಿ
"ಸರಕಾರ ರವಿಗೆ ಚಿತ್ರಹಿಂಸೆ ಕೊಟ್ಟು ಅಮಾನವೀಯವಾಗಿ ನಡೆಸಿಕೊಂಡಿದೆ"
ಬಸವರಾಜ ಬೊಮ್ಮಾಯಿ
ಹೊಸದಿಲ್ಲಿ: ಪರಿಷತ್ ಸದಸ್ಯ ಸಿ.ಟಿ.ರವಿ ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೋ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ಸರಕಾರ ರವಿಗೆ ಚಿತ್ರಹಿಂಸೆ ಕೊಟ್ಟು ಅಮಾನವೀಯವಾಗಿ ನಡೆಸಿಕೊಂಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಶುಕ್ರವಾರ ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ನಡವಳಿಕೆಯನ್ನು ನಾವು ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಈ ಸರಕಾರ ಯಾವುದೇ ಶಿಕ್ಷೆ ವಿಧಿಸಲಿಲ್ಲ. ಸಿ.ಟಿ.ರವಿ ತಾವು ಆ ರೀತಿ ಹೇಳಿಕೆ ನೀಡಲಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಾವು ನ್ಯಾಯಸಮರ್ಥವಾಗಿ ಮಾತನಾಡುತ್ತಿದ್ದೇವೆ. ನಾವೇನೂ ತನಿಖೆ ಬೇಡ ಎಂದು ಹೇಳಿಲ್ಲವಲ್ಲ. ಸತ್ಯಶೋಧನೆ ಆಗದೇ ತನಿಖೆಯಾಗದೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರುವುದು ತಪ್ಪು ಎಂದರು.
ಈ ಹಿಂದೆ ವಿಧಾನಸೌಧದಲ್ಲಿ ಈ ರೀತಿಯ ಪ್ರಕರಣಗಳು ನಡೆದಾಗ ಯಾರೂ ಪೊಲೀಸ್ ಸ್ಟೇಷನ್ಗೆ ಹೋಗಿರಲಿಲ್ಲ. ವಿಧಾನ ಮಂಡಲದ ಸಮಿತಿ ಮಾಡಿ ಅದರ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಹಾಗಿರುವಾಗ ಏಕಾಏಕಿ ಬಂಧಿಸಿ, ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋಗಿ, ರಾತ್ರಿಯೆಲ್ಲ ಊರೆಲ್ಲ ಸುತ್ತಿಸುವುದು ಯಾವ ಕಾನೂನಿನಲ್ಲಿ ಬರೆದಿದೆ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಆಡಳಿತ ಹಳಿ ತಪ್ಪಿದೆ. ಪೊಲೀಸ್ ರಾಜ್ಯ ನಡೆಯುತ್ತಿದೆ. ಪ್ರತಿಯೊಂದಕ್ಕೂ ಪೊಲೀಸ್ ದುರ್ಬಳಕೆ ಆಗುತ್ತಿದೆ. ವಿಪಕ್ಷಗಳ ಮೇಲೆ ದ್ವೇಷ ಸಾಧಿಸಲು ಹಲವಾರು ಎಸ್ಐಟಿ ರಚನೆ ಮಾಡಿ ಹಲವಾರು ತನಿಖೆ ಮಾಡುತ್ತಿದ್ದಾರೆ. ಸ್ವತಃ ಸಿಎಂ ಅವರೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರ ವಿರುದ್ದವೇ ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆ ದುರ್ಬಳಕೆ ವಿಧಾನಸೌಧದವರೆಗೂ ತಲುಪಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.