ಹೊರ ರಾಜ್ಯದ ಮಹಿಳೆಯ ಭೀಕರ ಹತ್ಯೆ: ಮೃತದೇಹ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದ ಆರೋಪಿ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಿಳೆಯನ್ನು ಹತ್ಯೆಮಾಡಿ ಮೃತದೇಹವನ್ನು 30ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟು ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿದ ಆರೋಪಿಯು ಪರಾರಿಯಾಗಿರುವ ಆಘಾತಕಾರಿ ಘಟನೆ ಇಲ್ಲಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ವರದಿಯಾಗಿದೆ.
ಹತ್ಯೆಯಾದ ಮಹಿಳೆಯನ್ನು ಮಹಾಲಕ್ಷ್ಮೀ (29) ಎಂದು ಗುರುತಿಸಲಾಗಿದೆ. ವಿವಾಹಿತೆಯಾಗಿದ್ದ ಮೃತ ಮಹಿಳೆ ವೈಯಕ್ತಿಕ ಕಾರಣಕ್ಕಾಗಿ ನೆಲಮಂಗಲದಲ್ಲಿ ವಾಸವಾಗಿದ್ದ ಪತಿ ಹುಕುಂ ಸಿಂಗ್ ರಾಣಾ ಹಾಗೂ ಮಗುವನ್ನು ತೊರೆದು ಮುನೇಶ್ವರ ನಗರದಲ್ಲಿ ಹಿಂದಿನ ಐದು ತಿಂಗಳುಗಳಿಂದ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಹಿಳೆಯ ಫೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ಅನುಮಾನಗೊಂಡ ಆಕೆ ತಾಯಿ ಹಾಗೂ ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಘಟನಾ ಸ್ಥಳಕ್ಕೆ ಡಿಸಿಪಿ ಶೇಖರ್ ತೆಕ್ಕಣ್ಣನವರ್, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದು, ಆರೋಪಿಯ ಪತ್ತೆಗೆ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಕೆಲ ದಿನ ಹಿಂದೆಯೇ ಮಹಿಳೆಯನ್ನು ಕೊಲೆ ಮಾಡಿರುವ ಆರೋಪಿ ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ದುರ್ವಾಸನೆ ಬಾರದಂತೆ ಕೆಮಿಕಲ್ ಸಿಂಪಡಿಸಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ. ಕೊಲೆಯಾದ ಮಹಿಳೆಯ ಫೋನ್ ಸೆ.2ರಂದು ಸ್ವಿಚ್ಡ್ ಆಫ್ ಆಗಿತ್ತು. ಅಂದೇ ಹತ್ಯೆಯಾಗಿರಬಹುದು ಎಂಬ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಗೊತ್ತಾಗಿದೆ. ಈ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮಹಿಳೆಯ ಮೃತದೇಹವನ್ನು 30ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಸಿಂಗಲ್ ಡೋರ್ನ 165 ಲೀಟರ್ಸ್ ಫ್ರಿಡ್ಜ್ ನಲ್ಲಿ ಇಡಲಾಗಿದೆ. ಮೃತ ಮಹಿಳೆಯನ್ನು ಛತ್ತೀಸ್ಘಡ ಅಥವಾ ಪಶ್ಚಿಮ ಬಂಗಾಳ ಮೂಲದ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಗಂಡನಿಂದ ಬೇರೆಯಾಗಿದ್ದ ಮಹಿಳೆ, ಒಬ್ಬರೇ ವಾಸವಾಗಿದ್ದರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’
-ಸತೀಶ್ ಕುಮಾರ್, ಕೇಂದ್ರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ