ಬಿಜೆಪಿ ಶಾಸಕ ಯತ್ನಾಳ್ಗೆ ಸುಪ್ರೀಂಕೋರ್ಟ್ ನೋಟಿಸ್
ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು : ಬಿಜಾಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಚುನಾವಣಾಧಿಕಾರಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಅಬ್ದುಲ್ ಹಮೀದ್ ಖ್ವಾಜಾ ಸಾಬ್ ಮುಶರೀಫ್ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಕಾಂಗ್ರೆಸ್ ಮುಖಂಡರಾಗಿರುವ ಅಬ್ದುಲ್ ಹಮೀದ್ ಖ್ವಾಜಾ ಸಾಬ್ ಮುಶರೀಫ್, ಹೈಕೋರ್ಟ್ನಲ್ಲಿ ಈ ಹಿಂದೆ ಸಲ್ಲಿಸಿದ್ದ ಒಂದು ಲಕ್ಷ ರೂ.ವೆಚ್ಚದ ಚುನಾವಣಾ ಅರ್ಜಿಯನ್ನು ಕೆಲವು ನ್ಯೂನತೆಗಳನ್ನು ಸರಿಪಡಿಸದೆ ಹಾಗೆಯೆ ಸಲ್ಲಿಸಲಾಗಿದೆ ಎಂದು ತಿಳಿಸಿ ವಜಾಗೊಳಿಸಲಾಗಿತ್ತು.
ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿರುವ ಖ್ವಾಜಾ ಮುಶರೀಫ್, ಹೈಕೋರ್ಟ್ ಈ ವಿಷಯದ ಬಗ್ಗೆ ಹೆಚ್ಚು ಸಮಗ್ರ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ನಾಯಕರ ಪರ ವಕೀಲರಾದ ಅನಂತ್ ಪ್ರಸಾದ್ ಮಿಶ್ರಾ, ರಹ್ಮತುಲ್ಲಾ ಕೊತ್ವಾಲ್ ಮತ್ತು ಸಿದ್ದಿಖಾ ಆಯಿಷಾ, ಅವರೊಂದಿಗೆ ಹಿರಿಯ ವಕೀಲ ಸಂಜಯ್ ಹೆಗ್ಡೆ ಇಂದು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡನೆ ಮಾಡಿದರು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಇಂದು ಮೇಲ್ಮನವಿಯನ್ನು ಅಂಗೀಕರಿಸಿ ನೋಟಿಸ್ ನೀಡಿದ್ದರೂ ವೆಚ್ಚವನ್ನು ಮೀಸಲಿಡಲು ನಿರಾಕರಿಸಿತು.
ಅಬ್ದುಲ್ ಹಮೀದ್ ಖ್ವಾಜಾ ಸಾಬ್ ಮುಶರೀಫ್ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜಾಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಯತ್ನಾಳ್ ವಿರುದ್ಧ ಸೋತಿದ್ದರು. ಯತ್ನಾಳ್ ಆಯ್ಕೆಯನ್ನು ಪ್ರಶ್ನಿಸಿ ಅವರು ರಾಜ್ಯ ಹೈಕೋರ್ಟ್ನ ಕಲಬುರಗಿ ಪೀಠಕ್ಕೆ ಚುನಾವಣಾ ಅರ್ಜಿಯನ್ನು ಸಲ್ಲಿಸಿದ್ದರು. ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದ ಬಳಿಕ ಅವರು ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.