ಯಡಿಯೂರಪ್ಪ ಮತ್ತವರ ಮಕ್ಕಳು ನಮಗೆ ಮೋಸ ಮಾಡಿದರು : ಕೆ.ಎಸ್.ಈಶ್ವರಪ್ಪ
"ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಒತ್ತಡ ಇದೆ "
ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾನು ಚುನಾವಣೆಗೆ ನಿಲ್ಲಲೇಬೇಕು ಎಂದು ಇಡೀ ಜಿಲ್ಲೆಯ ಎಲ್ಲ ಸಮಾಜದ ಪ್ರಮುಖರು, ಕಾರ್ಯಕರ್ತರು, ಜನಸಾಮಾನ್ಯರು ಒತ್ತಾಯ ಮಾಡುತ್ತಿದ್ದಾರೆ. ನಮಗೆ ಯಡಿಯೂರಪ್ಪ ಹಾಗೂ ಅವರ ಮಕ್ಕಳು ಅನ್ಯಾಯ ಮಾಡಿದ್ದಾರೆಂದು ಜನ ನೊಂದಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್, ಸದಾನಂದಗೌಡ, ಪ್ರತಾಪ್ ಸಿಂಹ ಹೀಗೆ ಅನೇಕರಿಗೆ ಅನ್ಯಾಯವಾಗಿದೆ. ರಾಜ್ಯದ ನೊಂದ ಕಾರ್ಯಕರ್ತರ ಧ್ವನಿಯಾಗಿ ನೀವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಬೇಕು ಎಂದು ನನ್ನ ಮೇಲೆ ಒತ್ತಾಯ ಹೇರುತ್ತಿದ್ದಾರೆ ಎಂದರು.
ನಾಳೆ(ಮಾ.15) ಸಂಜೆ 5 ಗಂಟೆಗೆ ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ಮುಖಂಡರು, ಕಾರ್ಯಕರ್ತರು, ಜನಸಾಮಾನ್ಯರ ಸಭೆ ಕರೆಯನ್ನು ಕರೆದಿದ್ದು, ಸಭೆಯಲ್ಲಿ ಬರುವ ಅಭಿಪ್ರಾಯವನ್ನು ಸಂಗ್ರಹಿಸಿ, ನನ್ನ ಅಂತಿಮ ತೀರ್ಮಾನವನ್ನು ಪ್ರಕಟಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.
ನನ್ನ ಮಗ ಕೆ.ಇ.ಕಾಂತೇಶ್‍ಗೆ ವಿಧಾನಪರಿಷತ್ ಸ್ಥಾನ ನೀಡುವ ವಿಚಾರದ ಕುರಿತು ಯಡಿಯೂರಪ್ಪ ಈವರೆಗೆ ನನ್ನ ಜೊತೆ ಮಾತನಾಡಿಲ್ಲ. ಒಂದು ಬಾರಿ ಹಾವೇರಿಯಲ್ಲಿ ಕಾಂತೇಶ್‍ಗೆ ಟಿಕೆಟ್ ಕೊಡಿಸಿ, ಚುನಾವಣಾ ಪ್ರಚಾರ ಮಾಡಿ ಗೆಲ್ಲಿಸುತ್ತೇನೆ ಎಂದು ಹೇಳಿ ಗೆಲ್ಲಿಸಿಯೂ ಆಯಿತು ಎಂದು ಅವರು ವ್ಯಂಗ್ಯವಾಡಿದರು.
ಯಡಿಯೂರಪ್ಪ ಮಾತನ್ನು ನಂಬಿ ನನ್ನ ಮಗ ಕ್ಷೇತ್ರದಲ್ಲಿ ವರ್ಷಾನುಗಟ್ಟಲೆ ಅಲ್ಲಿ ಓಡಾಡಿ, ಇನ್ನೇನು ಟಿಕೆಟ್ ಪಡೆದುಕೊಂಡು ಗೆಲ್ಲುತ್ತಾನೆ ಅನ್ನೋ ಸಂದರ್ಭದಲ್ಲಿ ಟಿಕೆಟ್ ಕೊಡದಂತೆ ಯಡಿಯೂರಪ್ಪ ಮೋಸ ಮಾಡಿದರು. ಈಗ ವಿಧಾನಪರಿಷತ್ ಸ್ಥಾನ ಕೊಡಿಸುತ್ತೇನೆ ಎಂದು ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡುತ್ತಿದ್ದಾರೆ. ಇವರನ್ನು ಹೇಗೆ ನಂಬೋದು? ಎಂದು ಈಶ್ವರಪ್ಪ ಪ್ರಶ್ನಿಸಿದರು.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ವಿರುದ್ಧದ ಆರೋಪದಲ್ಲಿ ಕ್ಲೀನ್‍ಚಿಟ್ ಸಿಕ್ಕಿದ ತಕ್ಷಣ ಮಂತ್ರಿ ಮಾಡುತ್ತೇನೆ ಎಂದರು. ಕ್ಲೀನ್‍ಚಿಟ್ ಬಂದರು ಮಂತ್ರಿ ಮಾಡಿಲ್ಲ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾರ್ಯಕರ್ತರು ‘ಗೋ ಬ್ಯಾಕ್ ಶೋಭಾ’ ಎಂದರು. ಆಕೆಯನ್ನು ಕರೆತಂದು ಸದಾನಂದಗೌಡರ ಕ್ಷೇತ್ರಕ್ಕೆ ಹಾಕಿದ್ದಾರೆ. ಜನರು, ಕಾರ್ಯಕರ್ತರು ಬೇಡ ಎಂದರೂ ತಮಗೆ ಬೇಕಾದವರನ್ನು ತಂದು ಅಭ್ಯರ್ಥಿ ಮಾಡಲು ಯಡಿಯೂರಪ್ಪಗೆ ಶಕ್ತಿಯಿದೆ ಎಂದು ಅವರು ಹೇಳಿದರು.
40 ವರ್ಷ ಪಕ್ಷದ ಸಂಘಟನೆಗೆ ಕೆಲಸ ಮಾಡಿದ್ದೇನೆ. ರಾಯಣ್ಣ ಬ್ರಿಗೇಡ್ ಮಾಡಿ ಲಕ್ಷಾಂತರ ಜನರನ್ನು ಸಂಘಟಿಸಿದ್ದೆ. ಯಾಕೆ ಇವರ ಕಣ್ಣು ಉರಿಯಾಯಿತೋ ಗೊತ್ತಿಲ್ಲ. ಅಮಿತ್ ಶಾ ಬಳಿ ಹೋಗಿ ರಾಯಣ್ಣ ಬ್ರಿಗೇಡ್ ನಿಲ್ಲಿಸುವಂತೆ ಸೂಚನೆ ಕೊಡಿಸಿದರು. ಮಂತ್ರಿ ಸ್ಥಾನಕ್ಕೆ ಮೋಸ ಮಾಡಿದರು, ಟಿಕೆಟ್ ಕೊಡಿಸುತ್ತೇನೆಂದು ಮೋಸ ಮಾಡಿದರು. ಈಗ ಎಂಎಲ್‍ಸಿ ಸ್ಥಾನ ನೀಡುತ್ತೇನೆ ಎಂದು ಮೂಗಿಗೆ ತುಪ್ಪು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.