ಬೆಂಗಳೂರು| ಶಿಕ್ಷಕಿಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಯುವಕನ ಮೇಲೆ ಹಲ್ಲೆ: ಎಫ್‍ಐಆರ್ ದಾಖಲು
ಬೆಂಗಳೂರು: ಶಾಲಾ ಶಿಕ್ಷಕಿಯೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಕ್ಕೆ ಶಿಕ್ಷಕಿಯ ಮೂವರು ಸಹೋದರರು ಯುವಕನ ಮೇಲೆ ಹಲ್ಲೆಗೈದು ಕೊಲೆ ಬೆದರಿಕೆ ಹಾಕಿದ ಆರೋಪದಡಿ ಇಲ್ಲಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಅ.1ರಂದು ಮಹಾಲಕ್ಷ್ಮಿ ಲೇಔಟ್‍ನ ಜಲಮಂಡಳಿ ಪಾರ್ಕ್ ಬಳಿ ಮೂವರು ಅಪ್ರಾಪ್ತರು ಹುಟ್ಟಹಬ್ಬ ಆಚರಿಸಿಕೊಂಡ ಮತ್ತೋರ್ವ ಅಪ್ರಾಪ್ತ ವಯಸ್ಸಿನ ಯುವಕನ ಮೇಲೆ ಹಲ್ಲೆ ನಡೆಸಿ, ಚೂಪಾದ ವಸ್ತುವಿನಿಂದ ಕೈಗೆ ಗಾಯ ಮಾಡಿ ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಕೊಲೆ ಬೆದರಿಕೆ ಹಾಕಿ ಯುವಕನನ್ನು ಮನೆಗೆ ಕಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವಕ ಕೈಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದನ್ನು ನೋಡಿದ ಪೋಷಕರು ಈ ಬಗ್ಗೆ ಪ್ರಶ್ನಿಸಿದಾಗ, ಯುವಕ ತಾನು ಸ್ಕೂಟರ್‍ನಲ್ಲಿ ಹೋಗುವಾಗ ಢಿಕ್ಕಿ ಹೊಡೆದು ಸಣ್ಣ ಗಾಜಿನ ತುಂಡಿನಿಂದ ಗಾಯ ಆಗಿದೆ ಎಂದು ತಿಳಿಸಿದ್ದ.
ಆದರೆ, ಮರುದಿನ ಬೆಳಗ್ಗೆ ಹಲ್ಲೆಗೊಳಗಾಗಿದ್ದ ಯುವಕನ ಸ್ನೇಹಿತನೊಬ್ಬ ಮನೆಗೆ ಬಂದು ಪೋಷಕರ ಬಳಿ ಹಲ್ಲೆ ನಡೆದ ಬಗ್ಗೆ ತಿಳಿಸಿದ್ದಾನೆ. ತಕ್ಷಣ ವಿಷಯ ತಿಳಿಯುತ್ತಿದ್ದಂತೆ ಯುವಕನ ಪೋಷಕರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಪ್ರಾಪ್ತ ಯುವಕನಿಗೆ ಶಾಲಾ ಶಿಕ್ಷಕಿಯೊಂದಿಗೆ ಒಡನಾಟವಿತ್ತು. ಹೀಗಾಗಿ ಅ.1ರಂದು ನಡೆದ ತನ್ನ ಹುಟ್ಟುಹಬ್ಬಕ್ಕೆ ಶಿಕ್ಷಕಿಯನ್ನೂ ಯುವಕ ಕರೆದಿದ್ದ. ಆದ ಕಾರಣ ಹುಟ್ಟಹಬ್ಬದ ಸಂಭ್ರಮಾಚರಣೆಗಾಗಿ ಶಿಕ್ಷಕಿ ಕೆಫೆಯೊಂದರಲ್ಲಿ ಭೇಟಿಯಾಗಿದ್ದರು. ಕೆಫೆಯಲ್ಲಿ ಶಿಕ್ಷಕಿಯೊಂದಿಗೆ ಯುವಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಎನ್ನಲಾಗಿದೆ. ಸಂಭ್ರಮಾಚರಣೆ ಮುಗಿಸಿ ಯುವಕ ಮನೆಗೆ ಹಿಂದಿರುಗುತ್ತಿದ್ದಾಗ, ಶಾಲೆಯ ಶಿಕ್ಷಕಿಯ ಸಹೋದರರು ಯುವಕನನ್ನು ರಸ್ತೆಯಲ್ಲಿ ತಡೆದು ಹಲ್ಲೆ ನಡೆಸಿದ್ದಾನೆ. ಶಿಕ್ಷಕಿಯ ಜತೆ ಮತ್ತೆ ಕಾಣಿಸಿಕೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್‍ಐಆರ್‍ನಲ್ಲಿ ದಾಖಲಿಸಲಾಗಿದೆ.
ಹಲ್ಲೆ ಮಾಡಿದವರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.