ಕರ್ನಾಟಕದಲ್ಲಿ ನಾಲೆಡ್ಜ್ ಸಿಟಿ ನಿರ್ಮಾಣ : ಸಚಿವ ಝಮೀರ್ ಅಹ್ಮದ್ ಖಾನ್

ಬೆಂಗಳೂರು : ಕೇರಳದ ಕಲ್ಲಿಕೋಟೆಯಲ್ಲಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಉಸ್ತಾದರು ನಿರ್ಮಾಣ ಮಾಡಿರುವ ನಾಲೆಡ್ಜ್ ಸಿಟಿ ಮಾದರಿಯಲ್ಲೆ ಬೆಂಗಳೂರಿನಲ್ಲೂ ನಾಲೆಡ್ಜ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಅದಿಯಾ ಎಜುಕೇಷನಲ್ ಫೌಂಡೇಶನ್‍ನ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಆದುದರಿಂದ, ನಾಲೆಡ್ಜ್ ಸಿಟಿ ನಿರ್ಮಾಣದಿಂದ ಭವಿಷ್ಯದ ಪೀಳಿಗೆಗೆ ಉತ್ತಮ ವಾತಾವರಣ ಲಭ್ಯವಾಗಲಿದೆ ಎಂದು ಹೇಳಿದರು.
ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ನೇತೃತ್ವ ವಹಿಸಿದರೆ ಅಂತಹ ನಾಲೆಡ್ಜ್ ಸಿಟಿ ನಿರ್ಮಾಣ ಮಾಡಲು ಸಾಧ್ಯ. ರಾಜ್ಯ ಸರಕಾರ ಹಾಗೂ ವೈಯಕ್ತಿಕವಾಗಿ ಈ ಕಾರ್ಯಕ್ಕೆ ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಸಅದಿಯ ಫೌಂಡೇಶನ್ ಕಳೆದ 20 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಬಡವರು ಹಾಗೂ ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ನನ್ನ ಮತ ಕ್ಷೇತ್ರದ ಹಲವಾರು ಮಕ್ಕಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶಿಕ್ಷಣವನ್ನು ನೀಡುವ ಕೇರಳದ ಮಾದರಿಯನ್ನು ಕರ್ನಾಟಕಕ್ಕೆ ಪರಿಚಯಿಸಿದ ಹೆಗ್ಗಳಿಕೆ ಸಅದಿಯಾ ಫೌಂಡೇಶನ್‍ಗೆ ಸಲ್ಲುತ್ತದೆ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಎಂಜಿನಿಯರ್, ಡಾಕ್ಟರ್, ಲಾಯರ್, ಪೊಲೀಸ್ ಅಧಿಕಾರಿಗಳಾಗಿದ್ದಾರೆ. ಜೊತೆಗೆ, ಆಲಿಮ್, ಹಾಫಿಝ್‍ಗಳು ಆಗಿದ್ದಾರೆ ಎಂದು ಅವರು ಹೇಳಿದರು.
ಈ ವರ್ಷ 22 ಮಕ್ಕಳು ಮುಫ್ತಿ, 45 ಮಕ್ಕಳು ಆಲಿಮ್, 13 ಮಕ್ಕಳು ಹಾಫಿಝ್, 25 ಹೆಣ್ಣು ಮಕ್ಕಳು ಆಲಿಮಾ ಪದವಿ ಪ್ರದಾನ ಮಾಡಲಾಯಿತು. ಅದೇ ರೀತಿ, ಸಅದಿಯಾ ಎಜುಕೇಷನಲ್ ಫೌಂಡೇಶನ್ 20 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಯುವ ಸಮುದಾಯಕ್ಕೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿಯಾಗಿರುವ ಯೂಸುಫ್ ಶರೀಫ್ ಯಾನೆ ಕೆ.ಜಿ.ಎಫ್.ಬಾಬು ಅವರಿಗೆ ‘ಸಅದಿಯಾ ಬಿಸಿನೆಸ್ ಮ್ಯಾಗ್ನೆಟ್ ಅವಾರ್ಡ್-2025’ ಅನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳದ ಕಾಸರಗೋಡಿನ ಜಾಮಿಯಾ ಸಅದಿಯಾ ಅರಬಿಯಾ ಹಾಗೂ ಸಅದಿಯಾ ಎಜುಕೇಷನಲ್ ಫೌಂಡೇಶನ್ ಅಧ್ಯಕ್ಷ ಸೈಯದ್ ಕೆ.ಎಸ್.ಅಟ್ಟಕೋಯ ತಂಙಳ್ ವಹಿಸಿದ್ದರು. ಕರ್ನಾಟಕ ಜಮೀಯತುಲ್ ಉಲಮಾ ಕಾರ್ಯದರ್ಶಿ ಕೆ.ಪಿ.ಹುಸೇನ್ ಸಅದಿ ಕೆ.ಸಿ.ರೋಡ್ ಮುಖ್ಯ ಪ್ರಭಾಷಣ ಮಾಡಿದರು. ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮುಫ್ತಿ ಮುಹಮ್ಮದ್ ಝಬೀಉಲ್ಲಾ, ಮುಫ್ತಿ ಶಬ್ಬೀರ್ ಅಹ್ಮದ್ ರಝ್ವಿ, ಝುಲ್ಫಿಖಾರ್ ನೂರಿ, ಮುಫ್ತಿ ಇಮ್ದಾದುಲ್ಲಾ ರಝ್ವಿ, ಮೌಲಾನಾ ವಾಲಿಬಾಬ, ರಾಜ್ಯ ಉರ್ದು ಅಕಾಡಮಿ ಅಧ್ಯಕ್ಷ ಮೌಲಾನಾ ಮುಹಮ್ಮದ್ ಅಲಿ ಖಾಝಿ, ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಾಫಿಲ್ ಸಅದಿ, ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಹಾಫಿಲ್ ಸುಫ್ಯಾನ್ ಸಖಾಫಿ, ಉಸ್ತಾದ್ ಅಬ್ದುಲ್ ಲತೀಫ್ ಸಅದಿ, ಮಾಜಿ ಸಚಿವ ರೋಷನ್ ಬೇಗ್ ಮುಂತಾದವರು ಭಾಷಣ ಮಾಡಿದರು.
ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಕೊಪ್ಪಳ ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ.ಅನ್ವರ್ ಬಾಷಾ, ಸಾಗರ ಮುಹಮ್ಮದ್ ಹಾಜಿ, ಡಾ.ಉಮರ್ ಹಾಜಿ, ಚಿಕ್ಕಮಗಳೂರು ಜಿಲ್ಲಾ ವಕ್ಫ್ ಅಧ್ಯಕ್ಷ ಶಾಹಿದ್ ರಝ್ವಿ ಮುಂತಾದವರು ಉಪಸ್ಥಿತರಿದ್ದರು. ಇಸ್ಮಾಯಿಲ್ ಸಅದಿ ಕೀನ್ಯಾ ಸ್ವಾಗತಿಸಿದರು. ಬಶೀರ್ ಸಅದಿ ಪೀಣ್ಯ ವಂದಿಸಿದರು.