ಬಿಡಿಎ ಅಧಿಸೂಚನೆಯನ್ನು ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ನಗರದ 12 ಗ್ರಾಮಗಳಲ್ಲಿ ಸುಮಾರು 4,043 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಯನ್ನು ಮಾನ್ಯ ಮಾಡಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಭೂ ಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿ 2014ರ ಜು.11ರಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪು ರದ್ದು ಮತ್ತು ಭೂ ಸ್ವಾಧೀನ ಅಧಿಸೂಚನೆಯನ್ನು ಎತ್ತಿಹಿಡಿಯುವಂತೆ ಕೋರಿ ಬಿಡಿಎ ಸುಮಾರು 140ಕ್ಕೂ ಅಧಿಕ ಪ್ರತ್ಯೇಕ ತಕರಾರು ಮೇಲ್ಮನವಿಗಳನ್ನು ಸಲ್ಲಿಸಿದ್ದು, ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಅಧಿಸೂಚನೆಯಲ್ಲಿ ಸ್ವಾಧೀನಕ್ಕೆ ಗುರುತಿಸ ಲಾಗಿದ್ದ ಜಾಗದಲ್ಲಿ ನರ್ಸರಿ ಅಭಿವೃದ್ಧಿಯಾಗಿರುವುದು ಹಾಗೂ ಕಟ್ಟಡ ನಿರ್ಮಾಣವಾಗಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ತಮ್ಮ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂಬ ಬಗ್ಗೆ ಯಾವುದಾದರೂ ಮನವಿಯಿದ್ದರೆ, ಭೂ ಮಾಲಕರು ಮೂರು ತಿಂಗಳಲ್ಲಿ ಬಿಡಿಎ ಮನವಿ ಸಲ್ಲಿಸಬೇಕು. ಬಿಡಿಎ ಆ ಮನವಿಗಳ ಕುರಿತು ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಭಾಗೀಯ ಪೀಠ ಆದೇಶಿಸಿದೆ.
ಸರಕಾರದಿಂದ ಪೂರ್ವಾನುಮತಿ ಪಡೆಯದಿರುವುದು ಸೇರಿದಂತೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಿಲ್ಲ. ಭೂ ಸ್ವಾಧೀನದಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಹಾಗಾಗಿ, ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕಾನೂನುಬಾಹಿರವಾಗಿದೆ ಎಂದು ತೀರ್ಮಾನಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ, ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ 2014ರ ಜು.11ರಂದು ಆದೇಶಿಸಿತ್ತು. ಇದೀಗ ಈ ತೀರ್ಪು ಅನ್ನು ರದ್ದುಪಡಿಸಿರುವ ವಿಭಾಗೀಯ ಪೀಠವು ಭೂ ಸ್ವಾಧೀನ ಅಧಿಸೂಚನೆಯನ್ನು ಪುರಸ್ಕರಿಸಿದೆ.
ಭೂ ಸ್ವಾಧೀನ ಪ್ರಕ್ರಿಯೆ ಕೈಗೆತ್ತಿಗೊಳ್ಳಲು ರಾಜ್ಯ ಸರಕಾರದಿಂದ ಬಿಡಿಎ ಅನುಮತಿ ಪಡೆದಿಲ್ಲ. ಮೊದಲಿಗೆ 4,814 ಎಕರೆ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯಲ್ಲಿ ಬಿಡಿಎ ಉದ್ದೇಶಿಸಿತ್ತು. ನಂತರ ವಿವಿಧ ಕಾರಣಗಳನ್ನು ನೀಡಿ ಸುಮಾರು 800 ಎಕರೆ ಜಮೀನನ್ನು ಅಂತಿಮ ಭೂ ಸ್ವಾಧೀನ ಅಧಿಸೂಚನೆಯನ್ನು ಕೈ ಬಿಡಲಾಗಿದೆ. ಆ ಮೂಲಕ ಭೂ ಸ್ವಾಧೀನದಲ್ಲಿ ತಾರತಮ್ಯ ಎಸಲಾಗಿದೆ ಎಂದು ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸುವ ಸಂದರ್ಭದಲ್ಲಿ ಏಕ ಸದಸ್ಯ ಪೀಠ ಹೇಳಿದೆ. ಆದರೆ, ಭೂ ಸ್ವಾಧೀನಕ್ಕೆ ಸರಕಾರದಿಂದ ಬಿಡಿಎ ಅನುಮತಿ ಪಡೆದಿದ್ದು, ಅದು ಕಾನೂಬದ್ಧವಾಗಿದೆ. ಇನ್ನೂ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂಬ ಕಾರಣಕ್ಕೆ ಇಡೀ ಭೂ ಸ್ವಾಧೀನ ಪ್ರಕ್ರಿಯೆಯೇ ಕಾನೂನು ಬಾಹಿರವಾಗಿದೆ ಎಂದು ಹೇಳಿ ಅಧಿಸೂಚನೆ ರದ್ದುಪಡಿಸಲಾಗದು. ತಾರತಮ್ಯ ಇದ್ದರೆ, ಆ ಕುರಿತು ಭೂ ಮಾಲೀಕರು ಮನವಿ ಪತ್ರ ಸಲ್ಲಿಸಿ ತಮ್ಮ ಕುಂದುಕೊರತೆ ಬಗೆಹರಿಸಿಕೊಳ್ಳಬಹುದು ಎಂದು ಆದೇಶದಲ್ಲಿ ವಿಭಾಗೀಯ ಪೀಠ ತಿಳಿಸಿದೆ.