ಅನೇಕಲ್ | ಫೇಸ್ಬುಕ್ ಲೈವ್ ಬಂದು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಪ್ರವೀಣ್ ಬೇಲೂರು
ಅನೇಕಲ್ : ಫೇಸ್ಬುಕ್ ಲೈವ್ಗೆ ಬಂದು ಬಿಜೆಪಿ ಕಾರ್ಯಕರ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ತಾಲೂಕಿನ ಸರಸ್ವತಿ ವಿದ್ಯಾಮಂದಿರ ಶಾಲೆ ಕಾಂಪೌಂಡ್ ಬಳಿ ನಡೆದಿದೆ.
ಆನೇಕಲ್ ಸಮಂದೂರು ಮೂಲದ ಪ್ರವೀಣ್ ಬೇಲೂರು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ.
ಆತ್ಮಹತ್ಯೆಗೂ ಮುನ್ನ ಫೇಸ್ಬುಕ್ ವಿಡಿಯೋ ಮಾಡಿ ಹಲವರ ಹೆಸರುಗಳನ್ನು ಪ್ರಸ್ತಾಪಿಸಿದ ಅವರು, ಆ ನಂತರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ಇವರೇ ಕಾರಣ ಎಂದು ಹಲವರನ್ನು ಹೆಸರಿಸಿರುವ ಅವರು, ಆ ಪೈಕಿ ಕಿರಣ್ ಎಂಬಾತನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ವಿರುದ್ಧವೂ ಆರೋಪ ಮಾಡಲಾಗಿದೆ. ಬಿಜೆಪಿ ಮುಖಂಡ ಮುನಿರಾಜುಗೌಡ ಮನೆಗೆ ಕರೆದಿದ್ದರು. ಆ ಸಂದರ್ಭದಲ್ಲಿ ಆನೇಕಲ್ ಕಾರ್ಪೊರೇಟರ್ ಭಾಗ್ಯಮ್ಮ ಹಾಗೂ ಆಕೆಯ ಪತಿ ಶ್ರೀನಿವಾಸ್ ಇದ್ದರು. ಏಕಾಏಕಿ ಹತ್ತಾರು ಮಂದಿಯನ್ನು ಕರೆಸಿಕೊಂಡಿದ್ದ ಭಾಗ್ಯಮ್ಮ, ಶ್ರೀನಿವಾಸ್, ಮೊಬೈಲ್ ಕಿತ್ತುಕೊಂಡು 2 ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಸಮಂದೂರು ಕಿರಣ್, ಹರೀಶ್, ಭಾಸ್ಕರ್ ಅವರ ಗುಂಪು ಹಲ್ಲೆ ನಡೆಸಿದೆ. ಹಣದ ವಿಚಾರವಾಗಿ ಮಾತುಕತೆಗೆ ಕರೆಸಿಕೊಂಡು ಮನಸೋ ಇಚ್ಛೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಪ್ರವೀಣ್ ಆರೋಪಿಸಿದ್ದಾರೆ.
‘‘ನಾನು ಸತ್ತ ಮೇಲೆ ನನ್ನ ದೇಹದ ಮೇಲಿರುವ ಗಾಯದ ಗುರುತುಗಳನ್ನು ಪರಿಶೀಲಿಸಿ. ಪೊಲೀಸರು ನನಗೆ ನ್ಯಾಯ ಕೊಡಿಸಬೇಕು’’ ಎಂದು ಪ್ರವೀಣ್ ಮನವಿ ಮಾಡಿದ್ದಾನೆ.
ಘಟನೆ ಸಂಬಂಧ ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.