ಬಂಟ್ವಾಳ : ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಕೂಟ
ಬಂಟ್ವಾಳ : ಮಾದಕ ಪದಾರ್ಥಗಳು ಇತ್ತೀಚೆಗೆ ಎಲ್ಲೆಂದರಲ್ಲಿ ವ್ಯಾಪಕವಾಗಿದ್ದು ಅದರಲ್ಲಿ ಶಿಕ್ಷಣ ಸಂಸ್ಥೆಗಳು ಹೊರತಾಗಿಲ್ಲ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ. ಇದರ ಬಗ್ಗೆ ಶಾಲಾ ಆಡಳಿತ ಮಂಡಳಿ, ಪೋಷಕರು, ಶಿಕ್ಷಕರು ಗಂಭೀರವಾಗಿ ಚಿಂತಿಸಬೇಕಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವಲ್ಲಿ ಜಾಗರೂಕತೆ ವಹಿಸಬೇಕಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ಅನಂತಪದ್ಮನಾಭ ಕೆ.ವಿ. ಹೇಳಿದರು.
ಬಂಟ್ವಾಳದ ತೌಹೀದ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ತೌಹೀದ್ ಸ್ಕೂಲ್ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಕ್ಷೇತ್ರಶಿಕ್ಷಣಾಧಿಕಾರಿ ಮಂಜುನಾಥ ಜಿ.ಎಂ. ಮಾತನಾಡಿ , ತೌಹೀದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ತಾಲೂಕಿನಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಮಾದರಿ ಶಾಲೆಯಾಗಿದ್ದು, ಈ ವಿದ್ಯಾರ್ಥಿಗಳು ಇಡೀ ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ. ಬಿ.ಎಚ್ ಖಾದರ್ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಕಬಡ್ಡಿ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಮುಹಮ್ಮದ್ ಸಾಹಿಲ್ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ವಿಜೇತರಾದ ಶಾಲಾ ವಿದ್ಯಾರ್ಥಿ ಅಹಮದ್ ಅಫಿಲ್ , ಮುಹಮ್ಮದ್ ರಶ್ವಿನ್ ಮತ್ತು ಅವರಿಗೆ ತರಬೇತು ನೀಡಿದ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರ ಮಂಡಳಿ ಸದಸ್ಯ ಅಬ್ದುಲ್ ಬಶೀರ್ ಕಲ್ಪನೆ, ಹನೀನ್ , ಶಾಲಾ ದೈಹಿಕ ಶಿಕ್ಷಕಿಯರಾದ ಗಾಯತ್ರಿ ಬಿ.ಸಿ, ಮಂಜುಳಾ ಶೆಟ್ಟಿ, ಹಾಗೂ ಜಿಲ್ಲಾ ಸಮನ್ವಯ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಅಸ್ಮಾ.ಜಿ ಇವರನ್ನು ಸನ್ಮಾನಿಸಲಾಯಿತು.
ಶಾಲಾ ಅಧ್ಯಕ್ಷ ರಿಯಾಜ್ ಹುಸೈನ್, ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಅಬ್ದುಲ್ ಖಾದರ್ ಮಾಸ್ಟರ್ , ಸದಸ್ಯರಾದ ಇಮ್ರಾನ್, ಮೂನಿಶ್ ಅಲಿ, ಹಾರೂನ್ ರಶೀದ್ ಉಬೈದುಲ್ಲಾ, ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಅರಬಿ, ಪಿ ಟಿ ಎ ಅಧ್ಯಕ್ಷ ಮುಸ್ತಫಾ ಮೊದಲಾದವರು ಭಾಗವಹಿಸಿದ್ದರು
ಮುಖ್ಯ ಶಿಕ್ಷಕ ಇಬ್ರಾಹಿಂ ಸಲೀಂ ಸ್ವಾಗತಿಸಿ, ಸಹಾಯಕ ಮುಖ್ಯ ಶಿಕ್ಷಕಿ ರಚನಾ ವಂದಿಸಿದರು.
ಶಿಕ್ಷಕಿಯರಾದ ಮಲ್ಲಿಕಾ ಹಾಗೂ ಆಯಿಶಾ ಕಾರ್ಯಕ್ರಮ ನಿರೂಪಿಸಿದರು.