ರಾಜ್ಯದಲ್ಲಿ 14ರಿಂದ 17 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ : ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದಲ್ಲಿ ಕನಿಷ್ಠ 14 ರಿಂದ 17 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಾವು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಸಚಿವರ ಮಕ್ಕಳಿಗೆ ಟಿಕೆಟ್ ಸಿಕ್ಕಿದ್ದರಿಂದ ಪಕ್ಷಕ್ಕೆ ಅನುಕೂಲವೇ ಆಗಿದೆ. ಪ್ರಮುಖವಾಗಿ ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಈಗಾಗಲೆ ಮುಂಗಾರು ಆರಂಭವಾಗಿದೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಪ್ರತಿಯೊಂದು ಗ್ರಾಮ ಪಮಚಾಯಿತಿಗೆ ಹೊಸ ನೀರಿನ ಟ್ಯಾಂಕರ್ ಗಳನ್ನು ಖರೀದಿಸಲು ಸೂಚನೆ ನೀಡಲಾಗಿದೆ. ಕೆಲವು ಕಡೆ ಟ್ಯಾಂಕರ್ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಕುರಿತು ಈಗಾಗಲೇ ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಹಿಡಕಲ್ ಡ್ಯಾಮ್ ನಿಂದ ಕೃಷ್ಣಾ ನದಿಗೆ ಒಂದು ಟಿಎಂಸಿ ನೀರು ಬಿಡಲಾಗಿದೆ. ಸದ್ಯದಲ್ಲೆ ಇನ್ನೊಂದು ಟಿಎಂಸಿ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬಿಜೆಪಿಯವರು ಆರೋಪಿಸುತ್ತಿರುವಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ನೇಹಾ, ಅಂಜಲಿ ಕೊಲೆಗಳಂತಹ ಪ್ರಕರಣಗಳು ಎಲ್ಲ ಸರಕಾರದ ಅವಧಿಯಲ್ಲಿಯೂ ನಡೆದಿದೆ. ಅಪರಾಧ ಪ್ರಕರಣಗಳು ಜರುಗದಂತೆ ಪೊಲೀಸ್ ಇಲಾಖೆಯವರು ಹೆಚ್ಚಿನ ಗಮನ ಇರಿಸಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ 100 ಹೊಸ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ 5 ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಸರಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ನಗರ ಶಾಸಕ ಆಸಿಫ್ ಸೇಠ್, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ಪಾಟೀಲ್, ಸುನೀಲ್ ಹಣಮನ್ನವರ್, ರಾಜಾ ಸಲೀಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಪುಟ ವಿಸ್ತರಣೆ ಆಗಲ್ಲ: ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವುದಿಲ್ಲ ಎಂಬುದು ನನಗಿರುವ ಮಾಹಿತಿ. ಆದರೂ, ಸಚಿವ ಸಂಪುಟ ಪುನರ್ ರಚನೆ, ವಿಸ್ತರಣೆ ಪಕ್ಷದ ಹೈಕಮಾಂಡ್ ವಿವೇಚನೆಗೆ ಬಿಟ್ಟು ವಿಚಾರ.