ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ : ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಳಗಾವಿ (ಸುವರ್ಣ ವಿಧಾನಸೌಧ) : ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಂ.ಜಿ.ಮೂಳೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 32 ಸಾವಿರ ಹುದ್ದೆಗಳಲ್ಲಿ ಈಗಾಗಲೇ ಹಲವು ರೀತಿ ಭರ್ತಿ ಮಾಡುವ ಕೆಲಸವಾಗಿದೆ. 500 ಹೆಚ್ಚು ವೈದ್ಯರನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗಿದ್ದು, ಒಟ್ಟಾರೆ 18,040 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗಿದೆ ಎಂದರು.
1,800 ಹುದ್ದೆಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದಾರೆ. ಆದಷ್ಟು ಬೇಗ ನೇಮಕಾತಿ ಮಾಡಲಾಗುವುದು. ತಜ್ಞ ವೈದ್ಯರ ನೇಮಕಾತಿಗಾಗಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದ ನಿಯಮದ ಪ್ರಕಾರ ತಜ್ಞ ವೈದ್ಯರ ವೇತನವಿದೆ. ಇದನ್ನು ಹೆಚ್ಚಳ ಮಾಡಲು ನಮಗೆ ಅನುಮತಿ ಕೊಡಬೇಕೆಂದು ಮನವಿ ಮಾಡಿದ್ದೇವೆ. ಕೇಂದ್ರದಿಂದ ಅಧಿಕೃತವಾಗಿ ಅನುಮತಿ ಬಂದ ಮೇಲೆ ತಜ್ಞ ವೈದ್ಯರಿಗೆ ನಾವೇ ವೇತನ ಹೆಚ್ಚಳ ಮಾಡಿ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ನರ್ಸ್ ಮತ್ತು ಟೆಕ್ನಿಷನ್ಸ್ ನೇಮಕಕ್ಕೆ ಆರ್ಥಿಕ ಇಲಾಖೆಗೆ ಮನವಿ ಮಾಡಿದ್ದೇವೆ. ಅವರು ಗುತ್ತಿಗೆ ಆಧಾರದಲ್ಲಿ ಅನುಮತಿ ಕೊಟ್ಟರೂ ಸಹ ನಾವು ನೇಮಕಾತಿ ಮಾಡಿಕೊಳ್ಳಲು ಸಿದ್ಧರಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.