ಬೆಳಗಾವಿ ಅಧಿವೇಶನ | ಅನಧಿಕೃತವಾಗಿ ವಾಸವಿದ್ದ 24 ಪಾಕ್ ಮತ್ತು 159 ಬಾಂಗ್ಲಾದೇಶ ಮೂಲದವರ ಬಂಧನ : ಜಿ.ಪರಮೇಶ್ವರ್
ಜಿ.ಪರಮೇಶ್ವರ್
ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರ ಮತ್ತು ರಾಜ್ಯದಲ್ಲಿ ಅನಧಿಕೃತವಾಗಿ ವಾಸವಿದ್ದ 24 ಪಾಕ್ ಮತ್ತು 159 ಬಾಂಗ್ಲಾದೇಶ ಮೂಲದವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಕ್ಕೆ ಪದೇ ಪದೇ ಅನಧಿಕೃತವಾಗಿ ಪ್ರವೇಶಿಸುವ ಇಂತಹ ಪ್ರಕರಣಗಳ ಬಗ್ಗೆ ನಿಗಾವಹಿಸಲು ಬೆಂಗಳೂರು ನಗರದಲ್ಲಿ ನಗರ ವಿಶೇಷ ಘಟಕವಿದ್ದು, ನಗರಕ್ಕೆ ಪ್ರವೇಶಿಸುವ ಯಾವುದೇ ವಿದೇಶಿಯರ ಬಗ್ಗೆ ಪೊಲೀಸ್ ಠಾಣೆಗಳ ಮೂಲಕ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಓ)ಯಿಂದ ಮಾಹಿತಿಯನ್ನು ಪಡೆದು, ಪ್ರತಿ ವಿಭಾಗೀಯ ಡಿಸಿಪಿಗಳ ಮುಖಾಂತರ ವಿಶೇಷ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ.
ಅಲ್ಲದೆ, ಸಿಸಿಬಿಯ ಸಂಘಟಿತ ಅಪರಾಧ ದಳ ಕಾರ್ಯಾಚರಣೆ ನಡೆಸುತ್ತಿದೆ. ಇತರೆ ನಗರ /ಜಿಲ್ಲೆಗಳಲ್ಲಿ ಅನಧಿಕೃತವಾಗಿ ಪ್ರವೇಶಿಸುವ ವಿದೇಶಿಯರುಗಳ ಪತ್ತೆಯ ಬಗ್ಗೆ ವಿಶೇಷ ಕಾರ್ಯಪಡೆ ರಚಿಸಿದ್ದು, ಅದು ಕಾರ್ಯನಿರ್ವಹಿಸುತ್ತಿದೆ ಎಂದು ಪರಮೇಶ್ವರ್ ಸದನಕ್ಕೆ ಮಾಹಿತಿ ನೀಡಿದರು.