ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆರ್ಥಿಕ ಇಲಾಖೆ ಅನುಮೋದನೆ ಇಲ್ಲದೆ ಕಾಮಗಾರಿ : ಸಚಿವ ಬೈರತಿ ಸುರೇಶ್ ಆಕ್ಷೇಪ
ಬೈರತಿ ಸುರೇಶ್
ಬೆಳಗಾವಿ(ಸುವರ್ಣ ವಿಧಾನಸೌಧ) : ‘ಆರ್ಥಿಕ ಇಲಾಖೆ ಅನುಮೋದನೆ ಇಲ್ಲದೆ ಹಿಂದಿನ ಬಿಜೆಪಿ ಸರಕಾರ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆಯೊಂದರಲ್ಲೇ 750 ಕೋಟಿ ರೂ. ಗೂ ಅಧಿಕ ಮೊತ್ತದ ಕಾಮಗಾರಿಗಳ ಹಣ ಪಾವತಿ ಬಾಕಿ ಇದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆಕ್ಷೇಪಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಡಿ. ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಬಿಜೆಪಿ ಸದಸ್ಯರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅನುದಾನ ಲಭ್ಯವಿಲ್ಲ ಎಂದು ದುಃಖಪಡುವ ಅಗತ್ಯವಿಲ್ಲ. ಸರಕಾರ 287 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. ರಸ್ತೆ ಗುಂಡಿ ಮುಚ್ಚಲು 14 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ವಿವಿಧ ಯೋಜನೆಗಳ ಡಿಪಿಎಆರ್ ಆಗಿದ್ದು ಇನ್ನೂ 10-15 ದಿನದಲ್ಲಿ ಟೆಂಡರ್ ಮಾಡಿ ಕಾರ್ಯಾರಂಭ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
ಆರಂಭಕ್ಕೆ ಮಾತನಾಡಿದ ಸದಸ್ಯ ವೇದವ್ಯಾಸ ಕಾಮತ್, ಹಿಂದಿನ ಬಿಜೆಪಿ ಸರಕಾರ ಬಜೆಟ್ನಲ್ಲಿ ನಿಗದಿಪಡಿಸಿದ್ದ ಅನುದಾನವೂ ಬಿಡುಗಡೆ ಮಾಡಿಲ್ಲ. ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಹಣವಿಲ್ಲ ಎಂದು ದೂರಿದರು. ಇದಕ್ಕೆ ಆಕ್ಷೇಪಿಸಿದ ಸಚಿವ ಬೈರತಿ ಸುರೇಶ್, ನಿಮ್ಮ ಅವಧಿಯಲ್ಲಿ ಹಣಕಾಸು ಇಲಾಖೆಯ ಮಂಜೂರಾತಿಯೇ ಇಲ್ಲದಂತೆ ಕೆಲಸ ಆರಂಭಿಸಲಾಗಿದೆ. ಇದರಿಂದ 750-800 ಕೋಟಿ ರೂ.ಗಳ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಉಳಿದಿದೆ ಎಂದರು.
2 ಸಾವಿರ ಕೋಟಿ ರೂ.ಅನುದಾನ :
ಬಿಜೆಪಿ ಸದಸ್ಯ ಚನ್ನಬಸಪ್ಪ (ಚೆನ್ನಿ) ರಾಜ್ಯ ಹಣಕಾಸು ನಿಗಮದಿಂದ ಸೂಕ್ತ ಅನುದಾನ ಬಂದಿಲ್ಲ. ಇಂತಹ ಅನುದಾನದಲ್ಲಿ ಶೇ.20ರಷ್ಟು ಮಾತ್ರ ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಈ ಮಿತಿಯನ್ನು ಸಡಿಲಗೊಳಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೈರತಿ ಸುರೇಶ್, ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಿಗೆ 2 ಸಾವಿರ ಕೋಟಿ ರೂ.ನೀಡಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಗೆ 140 ಕೋಟಿ ರೂ. ಒದಗಿಸಲಾಗಿದೆ ಎಂದರು.