ಬೆಳಗಾವಿ | ಬಾಣಂತಿ ಸಾವು : ವೈದ್ಯರ ನಿರ್ಲಕ್ಷ್ಯ ಆರೋಪ
ಸಾಂದರ್ಭಿಕ ಚಿತ್ರ pinterest.com
ಬೆಳಗಾವಿ : ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಜನರ ನೆನಪಿನಿಂದ ಮಾಸುವ ಮುನ್ನವೇ ಇಲ್ಲಿನ ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಬಿಮ್ಸ್)ನಲ್ಲಿ ಬಾಣಂತಿಯೊಬ್ಬರು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಕೊಟಬಾಗಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ವೈಶಾಲಿ ಅವರು ನಿನ್ನೆ ಹೆರಿಗೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ದಾಖಲಾಗಿದ್ದರು. ಶನಿವಾರ ಬೆಳಗ್ಗೆ ಸಿಜೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಎನ್ನಲಾಗಿದೆ.
ವೈಶಾಲಿ ಕೊಟಬಾಗಿ ಇಂದು ಬೆಳಗ್ಗೆಯ ವರೆಗೂ ಹುಷಾರಾಗಿಯೇ ಇದ್ದರು. ಬೆಳಗ್ಗೆ 7 ಗಂಟೆಯಿಂದ ಎದೆನೋವು ಎಂದು ಹೇಳಿದ್ದರು. ಆದರೆ, ಬೆಳಗ್ಗೆ 10.30ರ ವರೆಗೂ ಯಾವೊಬ್ಬ ವೈದ್ಯರೂ ಬರಲಿಲ್ಲ ಎಂದು ಮೃತ ವೈಶಾಲಿಯವರ ಅತ್ತೆ ಈರವ್ವ ದೂರಿದ್ದಾರೆ. ಇನ್ನು, ವೈಶಾಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ವೈಶಾಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಬಾರದು. ನಮಗೆ ವೈದ್ಯರ ಮೇಲೆ ನಂಬಿಕೆ ಇಲ್ಲ ಎಂದು ಕುಟುಂಬಸ್ಥರು ಆಗ್ರಹಿಸಿದರು. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.