ಬೆಳಗಾವಿ | ಪೊಲೀಸ್ ಠಾಣೆ ಎದುರು ತಂದೆಯ ಮೃತದೇಹವಿಟ್ಟು ಇನ್ಸ್‌ಪೆಕ್ಟರ್ ಪ್ರತಿಭಟನೆ

ಬೆಳಗಾವಿ : ಪೊಲೀಸ್ ಠಾಣೆ ಎದರು ತಂದೆಯ ಮೃತದೇಹವಿಟ್ಟು ಇನ್ಸ್‌ಪೆಕ್ಟರ್ ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿಯ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಹಾರೂಗೇರಿ ಪೊಲೀಸ್ ಠಾಣೆ ಪಿಎಸ್ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೇವದುರ್ಗ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಶೋಕ ಸದಲಗಿ ಪ್ರತಿಭಟನೆ ನಡೆಸಿದ್ದಾರೆ.
ಇನ್ಸ್ಪೆಕ್ಟರ್ ಅಶೋಕ ಸದಲಗಿ ತಂದೆ ಅಣ್ಣಪ್ಪ ಅವರ ಜಮೀನಿಗೆ ಕೆಲವರು ಜ.10ರಂದು ಅಕ್ರಮ ಪ್ರವೇಶ ಮಾಡಿದ್ದರು. ಇದನ್ನು ಪ್ರಶ್ನಿಸಿದ ಅಣ್ಣಪ್ಪ ಅವರಿಗೆ ಬಾಬು ನಡೋಣಿ, ಪ್ರತಾಪ್ ಹರೋಲಿ, ವಸಂತ ಚೌಗಲಾ ಮತ್ತು ಇವರ ಗುಂಪು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದಾದ ಬಳಿಕ ಅಣ್ಣಪ್ಪ ಪೊಲೀಸರನ್ನು ಸ್ಥಳಕ್ಕೆ ಕರೆದಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಅಣ್ಣಪ್ಪ ಹಾಗೂ ಬಾಬು ನಡೋಣಿ ಸೇರಿದಂತೆ ಎಲ್ಲರನ್ನೂ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಬಳಿಕ ಪೊಲೀಸರು ಅಣ್ಣಪ್ಪರನ್ನು ಇಡೀ ದಿನ ಠಾಣೆಯಲ್ಲಿರಿಸಿಕೊಂಡು ಕಿರುಕುಳ ನೀಡಿದ್ದಾರೆ ಆರೋಪಿಸಲಾಗಿದೆ.
ಪರಿಣಾಮ, ಅಣ್ಣಪ್ಪ ಅವರ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ. ಜೊತೆಗೆ, ಬಿಪಿ ಕೂಡ ಹೆಚ್ಚಾಗಿದೆ. ಹೀಗಾಗಿ, ಅಣ್ಣಪ್ಪ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಅಣ್ಣಪ್ಪ ಸಾವನ್ನಪ್ಪಿದ್ದಾರೆ.
ಹಾರೂಗೇರಿ ಪೊಲೀಸ್ ಇನ್ಸ್‌ಪೆಕ್ಟರ್ ಮಾಳಪ್ಪ ಪೂಜಾರಿ ಅವರು ನೀಡಿರುವ ಕಿರುಕುಳ ಮತ್ತು ನಿರ್ಲಕ್ಷ್ಯ ಧೋರಣೆಯಿಂದಲೇ ತಮ್ಮ ತಂದೆ ಅಣ್ಣಪ್ಪ ಸಾವನ್ನಪ್ಪಿದ್ದಾರೆ. ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ತಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಇನ್‌ಸ್ಪೆಕ್ಟರ್ ಅಶೋಕ್ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಚಿಕ್ಕೋಡಿ ಡಿವೈಎಸ್‌ಪಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.