ಬೆಳಗಾವಿ | ಮರಾಠಿ ಬರಲ್ಲ ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಹಲ್ಲೆ; ಆರೋಪ

ಬೆಳಗಾವಿ : ಸಾರಿಗೆ ಬಸ್ ನಿರ್ವಾಹಕನ ಮೇಲೆ ಕೆಲ ಯುವಕರು ಗೂಂಡಾಗಿರಿ ನಡೆಸಿದ್ದು, ಕನ್ನಡದಲ್ಲಿ ಮಾತನಾಡು ಅಂದಿದ್ದಕ್ಕೆ ನಿರ್ವಾಹಕನ ಮೇಲೆಯೇ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಹಲ್ಲೆಗೊಳಗಾದ ನಿರ್ವಾಹಕನನ್ನು ಮಹದೇವ ಎಂದು ಗುರುತಿಸಲಾಗಿದೆ. ಬೆಳಗಾವಿ ತಾಲೂಕಿನ ಸುಳೇಬಾವಿ, ಬಾಳೇಕುಂದ್ರಿ ಗ್ರಾಮ ಮಧ್ಯೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
ಬಸ್ ಪ್ರಯಾಣದ ವೇಳೆ ನಿರ್ವಾಹಕ ಮಹದೇವಗೆ ಟಿಕೆಟ್ ಕೊಡುವಂತೆ ಯುವತಿಯೊಬ್ಬಳು ಮರಾಠಿಯಲ್ಲಿ ಕೇಳಿದ್ದಾಳೆ. ಯುವತಿ ಜೊತೆ ಯುವಕ ಪ್ರಯಾಣ ಮಾಡುತ್ತಿದ್ದರಿಂದ 2 ಟಿಕೆಟ್ ಕೇಳಿದ್ದಳು. ಈ ವೇಳೆ ʼನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿʼ ಎಂದು ನಿರ್ವಾಹಕ ಮಹದೇವ ಹೇಳಿದ್ದಾರೆ.
ಇಷ್ಟಕ್ಕೆ ಜನರನ್ನು ಕರೆಸಿ ಚಲಿಸುತ್ತಿರುವ ಬಸ್ ನಿಲ್ಲಿಸಿ ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ನಿರ್ವಾಹಕನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಸಿಪಿ ರೋಹನ್ ಜಗದೀಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಮಾಹಿತಿ ಪಡೆದುಕೊಂಡಿದ್ದಾರೆ.