ಬೆಳಗಾವಿ | ಸೇನಾ ನೇಮಕಾತಿ ವೇಳೆ ‘ಲಾಠಿ ಪ್ರಹಾರ’
ಸಾಂದರ್ಭಿಕ ಚಿತ್ರ
ಬೆಳಗಾವಿ : ಟೆರಿಟೋರಿಯಲ್ ಸೇನೆಯಲ್ಲಿನ ಸೈನಿಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಬಂದಿದ್ದರಿಂದ ಬೆಳಗಾವಿ ಸಿಪಿಎಡ್ ಮೈದಾನ ಮುಂಭಾಗದ ರಸ್ತೆಯಲ್ಲಿ ನೂಕುನುಗ್ಗಲು ಉಂಟಾಯಿತು. ಈ ವೇಳೆ ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಪ್ರಸಂಗ ಜರುಗಿತು.
ರವಿವಾರ ಸೈನಿಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿದಂತೆ ರಾಜ್ಯದ 16 ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಬಂದಿದ್ದರು. ಒಮ್ಮೆಲೆ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಂಡ ಪರಿಣಾಮ ನೂಕುನುಗ್ಗಲು ಉಂಟಾಯಿತು.
ಆಗ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ ದೃಶ್ಯ ಕಂಡಿತು. ಬಳಿಕ ಪೊಲೀಸರು ಮತ್ತು ಸೇನಾ ದಳದ ಸಿಬ್ಬಂದಿ ಎಲ್ಲರನ್ನೂ ಸರತಿ ಸಾಲಿನಲ್ಲಿ ನಿಲ್ಲಿಸಿದರು.
ಇನ್ನೂ ಮುಂಜಾನೆ ನಗರದ ಸಿಪಿಎಡ್ ಮೈದಾನ ರಸ್ತೆಯಲ್ಲಿ ಕುಳಿತ ಅಭ್ಯರ್ಥಿಗಳ ಎತ್ತರ ಪರೀಕ್ಷೆಯನ್ನು ಮಾಡಲಾಯಿತು. ನಂತರ ರಾಷ್ಟ್ರೀಯ ಮಿಲಿಟರಿ ಶಾಲೆ ಮೈದಾನದತ್ತ ದೈಹಿಕ ಸಾಮರ್ಥ್ಯ ಪರೀಕ್ಷೆಗಾಗಿ ತೆರಳಿದರು. ಆಗ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.