ಬೆಳಗಾವಿ : ಜಾತ್ರೆಯ ಪ್ರಸಾದ ಸೇವಿಸಿ 46 ಮಂದಿ ಅಸ್ವಸ್ಥ; ಐವರ ಸ್ಥಿತಿ ಗಂಭೀರ
ಬೆಳಗಾವಿ: ಜಾತ್ರೆಯ ಪ್ರಸಾದ ಸೇವಿಸಿ 46 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಐವರು ಗಂಭೀರ ಸ್ಥಿತಿಯಲ್ಲಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಭೀರೇಶ್ವರ ಮತ್ತು ಕರೆಮ್ಮ ಜಾತ್ರೆಯಲ್ಲಿ ಅನ್ನ ಪ್ರಸಾದ ಮತ್ತು ಮನೆಯಲ್ಲಿ ಮಾವಿನ ಹಣ್ಣಿನ ಶಿಖರಣಿ ಸೇವಿಸಿದ್ದ ಗ್ರಾಮಸ್ಥರಲ್ಲಿ ಬುಧವಾರ ಏಕಾಏಕಿ ವಾಂತಿ-ಭೇದಿ ಕಾಣಿಸಿಕೊಂಡಿತು ಎನ್ನಲಾಗಿದೆ.
ಕೂಡಲೇ ಅಸ್ವಸ್ಥಗೊಂಡವರನ್ನು ಸ್ಥಳೀಯ ಸವದತ್ತಿ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರ ಅಸ್ವಸ್ಥಗೊಂಡ ಐವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಗ್ರಾಮದಲ್ಲಿ ಕ್ಯಾಂಪ್ ತೆರೆದು ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
"ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಸಾದ ಸೇವಿಸಿದವರಲ್ಲಿ ವಾಂತಿಭೇದಿ ಕಂಡುಬಂದ ತಕ್ಷಣವೇ ಎಲ್ಲರಿಗೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗಿದೆ. ಪ್ರತಿ ಗಂಟೆಗೂ ರೋಗಿಗಳ ಮಾನಿಟರ್ ಚೆಕ್ ಮಾಡಲಾಗುತ್ತಿದೆ" ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಸವದತ್ತಿ ಮತಕ್ಷೇತ್ರದ ಶಾಸಕ ವಿಶ್ವಾಸ್ ವೈದ್ಯ, ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.