ಬೆಳಗಾವಿ | ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಆರೋಪ ; ಪುತ್ರಿಯಿಂದ ದೂರು ದಾಖಲು
ಕಾಗವಾಡ: ಭೂ ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ 7 ತಿಂಗಳ ಬಳಿಕ ಬಹಿರಂಗವಾಗಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆಯ ಪುತ್ರಿ ಕಾಗವಾಡ ಠಾಣೆಯಲ್ಲಿ ಗುರುವಾರ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಈ ವಿಚಾರ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೊ ವೈರಲ್ ಆಗಿದ್ದು, ಇದರಿಂದ ಗ್ರಾಮಕ್ಕೆ ಭೇಟಿ ನೀಡಿದ ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಕಾಗವಾಡ ತಹಶೀಲ್ದಾರ್ ಸಂಜಯ ಇಂಗಳೆ ಇವರುಗಳು ಸಂತ್ರಸ್ತ ಮಹಿಳೆ ಮತ್ತು ಕುಟುಂಬದಿಂದ ಘಟನೆ ಸಂಬಂಧ ಮಾಹಿತಿ ಕಲೆ ಹಾಕಿದರು ಎಂದು ಹೇಳಲಾಗಿದೆ.
" 2023ರ ಜುಲೈ 31ರಂದು ನನ್ನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದು, ಆಗಸ್ಟ್ 1ರಂದು ತಮ್ಮನ ಮೇಲೂ ಹಲ್ಲೆ ಮಾಡಿದ್ದಾರೆ. ಆ ಬಳಿಕ ಪೊಲೀಸರಿಗೆ ದೂರು ನೀಡದಂತೆ ಜೀವ ಬೆದರಿಕೆಯನ್ನೂ ಸಹ ಒಡ್ಡಿದ್ದರು’ ಎಂದು ಸಂತ್ರಸ್ತೆಯ ಪುತ್ರಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಕಾರಣ:
ಸರಕಾರವು ಸಂತ್ರಸ್ತೆಗೆ ಮಂಜೂರು ಮಾಡಿದ್ದ ಮೂರು ಎಕರೆ ಭೂಮಿಯಲ್ಲಿ ಅರ್ಧ ಎಕರೆ ಭೂಮಿಯ ಒತ್ತುವರಿಯನ್ನು ಪ್ರಶ್ನಿಸಿದ್ದಕ್ಕಾಗಿ ಸಂತ್ರಸ್ತೆ ಮತ್ತು ಮಗನನ್ನು ಥಳಿಸಿದ್ದರು ಎನ್ನಲಾಗಿದೆ.