ಬೆಳಗಾವಿ: ಜಮೀನು ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಕುಟುಂಬ ಸಮೇತ ಬೀದಿಗಿಳಿದ ರೈತರು
ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು
ಬೆಳಗಾವಿ: ಜಮೀನು ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಚೆನ್ನಮ್ಮ ವೃತ್ತದಲ್ಲಿ ರೈತರು ಕುಟುಂಬ ಸಮೇತ ಬೀದಿಗಿಳಿದು ಪ್ರತಿಭಟನೆ ಕೈಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾ.ಪಂ ವ್ಯಾಪ್ತಿಯ 9 ಗ್ರಾಮದ ರೈತರಿಂದ ಭೂಮಿ ಉಳಿವಿಗಾಗಿ ಹೋರಾಟ ನಡೆಯುತ್ತಿದ್ದು, ಚೆನ್ನಮ್ಮ ವೃತ್ತದಲ್ಲಿ ರಸ್ತೆಯಲ್ಲಿ ಕುಟುಂಬ ಸಮೇತ ಪ್ರತಿಭಟನೆ ನಡೆಸಿದ್ದಾರೆ.
ಉಳುವವನೇ ಭೂ ಒಡೆಯ ಯೋಜನೆಯಡಿ ಭೂಮಿ ಪಡೆದಿದ್ದ ಗ್ರಾಮಸ್ಥರ ವಿರುದ್ಧ ಭೂಮಿ ನಮ್ಮದು ಎಂದು ಇನಾಮದಾರ ಕುಟುಂಬ ಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ವರದಿ ನೀಡುವಂತೆ ತಹಶಿಲ್ದಾರರಿಗೆ ಸೂಚನೆ ನೀಡಿದ್ದ ಕೋರ್ಟ್, ವರದಿ ಬಳಿಕ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಆದೇಶ ನೀಡಿತ್ತು.
ಈ ಸಂದರ್ಭ ಅಧಿಕಾರಿಗಳು ಗುಡ್ಡಗಾಡು ಪ್ರದೇಶ ಅಂತಾ ಕೋರ್ಟ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪ ಮಾಡಿರುವ ರೈತರು, ಮರು ಸಮೀಕ್ಷೆ ನಡೆಸಬೇಕು ಹಾಗೂ ಜಮೀನು ಹಕ್ಕು ಪತ್ರ ನೀಡುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಬರುವಂತೆ ರೈತರು ಪಟ್ಟು ಹಿಡಿದಿದ್ದು, ಪ್ರತಿಭಟನೆ ಮುಂದುವರಿಸಿದ್ದಾರೆ.
ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು:
ಈ ಸಂದರ್ಭ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದ್ದು, ಪೊಲೀಸರ ತೀವ್ರ ವಿರೋಧದ ನಡುವೆ ರೈತರು ರಾಷ್ಟ್ರೀಯ ಹೆದ್ದಾರಿ ತಡೆದಿದ್ದಾರೆ. ಪರಿಣಾಮ ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ವೇಳೆ ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.