ಬೆಳಗಾವಿ | ಸುವರ್ಣಸೌಧದ ಮುಂದೆ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ
ಸಂವಿಧಾನ-ಪ್ರಜಾತಂತ್ರ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ : ಮಲ್ಲಿಕಾರ್ಜುನ ಖರ್ಗೆ

ಬೆಳಗಾವಿ: ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬೃಹತ್ ಪುತ್ಥಳಿಯನ್ನು ಚರಕವನ್ನು ತಿರುಗಿಸುವ ಮೂಲಕ ಮಂಗಳವಾರ ಅನಾವರಣಗೊಳಿಸಿದರು.
ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಗಾಂಧೀಜಿಯವರ ಪುತ್ಥಳಿಯ ಸ್ಥಾಪನೆಯಿಂದ ಈ ಭಾಗಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಗೌರವ ತಂದಿದೆ’ ಎಂದು ಅಭಿಪ್ರಾಯಪಟ್ಟರು.
‘ಸಂವಿಧಾನ ಹಾಗೂ ಪ್ರಜಾತಂತ್ರ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು. ಗಾಂಧೀಜಿ ದೇಶಕ್ಕೆ ನೀಡಿದ ಕೊಡುಗೆಯನ್ನು ಈಗ ಎಲ್ಲರೂ ಸ್ಮರಿಸುತ್ತಿದ್ದಾರೆ. ಗಾಂಧೀಜಿ ತಮ್ಮ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಅಧಿವೇಶನದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಕರೆ ನೀಡಿದ್ದರು. ಆದುದರಿಂದ, ಈ ನೆಲವು ಐತಿಹಾಸಿಕ ಮಹತ್ವವನ್ನು ಹೊಂದಿದೆ’ ಎಂದು ಅವರು ಹೇಳಿದರು.
‘1924ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳದಲ್ಲಿಯೇ ನೂರು ವರ್ಷದ ಬಳಿಕ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಿರುವುದು ಅತ್ಯಂತ ಮಹತ್ವದ್ದಾಗಿದೆ. ಗುಲ್ಬರ್ಗದಲ್ಲೂ ಮಹಾತ್ಮ ಗಾಂಧೀಜಿಯವರ ವಿಶೇಷ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಂತಹ ಏಕೈಕ ಕಾಂಗ್ರೆಸ್ ಅಧಿವೇಶನ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ನಡೆದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ’ ಎಂದು ಬಣ್ಣಿಸಿದರು.
ಮಹಾತ್ಮ ಗಾಂಧೀಜಿ ಅಂದು ಅಸ್ಪೃಶ್ಯತೆ ನಿವಾರಣೆ, ಸಮಾನತೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಕುರಿತು ಪ್ರತಿಪಾದನೆ ಮಾಡಿದ್ದರು. ಗಾಂಧೀಜಿ ಸದಾ ಶ್ರೀರಾಮನ ಸ್ಮರಣೆ ಮಾಡುತ್ತಿದ್ದರು. ಅವರು ಅಪ್ಪಟ ಹಿಂದೂ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಅವರು ಎಂದೂ ಹಿಂದೂ ವಿರೋಧಿಯಾಗಿರಲಿಲ್ಲ. ಆದರೆ ಹಿಂದೂ ಧರ್ಮದಲ್ಲಿ ಸಮಾನತೆ ಮತ್ತು ಸಹೋದರತೆಯನ್ನು ಬಯಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ‘ಇದೊಂದು ಐತಿಹಾಸಿಕ ಕಾರ್ಯಕ್ರಮ. ಇದು ಕೇವಲ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾತ್ರವಲ್ಲ. ಸ್ವಾತಂತ್ರ್ಯ ಯೋಧರಿಗೆ ಗೌರವಿಸುವ ಮತ್ತು ಸಂವಿಧಾನದ ಘನತೆ ಎತ್ತಿ ಹಿಡಿಯುವ ಪವಿತ್ರ ಕಾರ್ಯಕ್ರಮವಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ರಾಜ್ಯದ ಏಕೀಕರಣಕ್ಕೂ ಗಾಂಧಿಜಿಯವರ ಪ್ರೇರಣೆ ದೊರೆತಿದೆ. ಏಕತೆ, ಸಮಾನತೆ ಕಾಪಾಡಿಕೊಂಡು ಗಾಂಧೀಜಿಯವರ ತತ್ವಾದರ್ಶಗಳನ್ನು ಪುನರ್ ಮನನ ಮಾಡಲು ಇದು ಸ್ಫೂರ್ತಿದಾಯಕವಾಗಿದೆ. ಗಾಂಧೀಜಿಯವರ ತತ್ವಗಳನ್ನು ಬದಿಗಿಟ್ಟು ಸದೃಢ ಭಾರತ ನಿರ್ಮಾಣ ಅಸಾಧ್ಯ. ಆದುದರಿಂದ, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರೂ ಒಗ್ಗೂಡಿಕೊಂಡು ಮುನ್ನಡೆಯಬೇಕಿದೆ’ ಎಂದು ಅವರು ಕರೆ ನೀಡಿದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಮಹಾತ್ಮ ಗಾಂಧೀಜಿಯವರ ಪ್ರತಿಮೆ ಅನಾವರಣ ಒಂದು ಅವಿಸ್ಮರಣೀಯ ಗಳಿಗೆಯಾಗಿದೆ. ವಿಗ್ರಹವಲ್ಲ ಚೈತನ್ಯದ ಹರಿವು ಇದಾಗಿದೆ. ಈ ಪ್ರತಿಮೆಯು ಗಾಂಧೀಜಿ ಅನುಯಾಯಿಗಳಿಗೆ ಪ್ರೇರಣೆಯಾಗಲಿದೆ ಎಂದು ಹೇಳೀದರು.
ಸಮಾರಂಭದಲ್ಲಿ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಂಸದೆ ಪ್ರಿಯಾಂಕಾ ಗಾಂಧಿ, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಜೈರಾಮ್ ರಮೇಶ್ ಸೇರಿದಂತೆ ಇನ್ನಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪರವಾಗಿ ಅತಿಥಿಗಳನ್ನು ಸನ್ಮಾನಿಸಿ, ಗೌರವಿಸಿದರು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ವಂದಿಸಿದರು. ಬಿ.ಸಿ.ಭಾನುಮತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಗ್ರಾಮೀಣ ವಿವಿಗೆ ‘ಗಾಂಧೀಜಿ’ ಹೆಸರು ಮರುನಾಮಕರಣ: ಗದಗ ಜಿಲ್ಲೆಯಲ್ಲಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾನಿಲಯವನ್ನು ‘ಮಹಾತ್ಮ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾನಿಲಯ’ ಎಂದು ಮರು ನಾಮಕರಣ ಮಾಡುವುದರ ಜತೆಗೆ ನೂತನ ಲಾಂಛನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ವಿವಿಯ ಕುಲಪತಿ ಡಾ.ಸುರೇಶ್ ನಾಡಗೌಡರ ಉಪಸ್ಥಿತರಿದ್ದರು.
‘ಗಾಂಧಿ ಭಾರತ-ಮರು ನಿರ್ಮಾಣ’ ಪ್ರಕಟಣೆಗಳ ಬಿಡುಗಡೆ: ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳು, ಅಧ್ಯಕ್ಷೀಯ ಭಾಷಣ ಮತ್ತಿತರ ಮಾಹಿತಿಗಳು ಹಾಗೂ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ‘ಗಾಂಧಿ ಭಾರತ-ಮರು ನಿರ್ಮಾಣ’ ಹಾಗೂ Reclaiming Gandhi Bharath ಕನ್ನಡ ಹಾಗೂ ಆಂಗ್ಲ ಪುಸ್ತಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.
ವಿಶೇಷ ಅಂಚೆ ಚೀಟಿ-ಕೃತಿಗಳ ಬಿಡುಗಡೆ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ‘ಗಾಂಧಿ ಭಾರತ’ ವಿಶೇಷ ಅಂಚೆ ಲಕೋಟೆ ಹಾಗೂ ಉದಯ ಕಾಲ ಸಮೂಹದ ‘ಗಾಂಧಿ ಬಿತ್ತಿದ ಬೆಳಕು’ ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.