ಬೆಳಗಾವಿ | ಎರಡು ತಿಂಗಳ ಹೆಣ್ಣು ಮಗುವನ್ನು ಕೆರೆಗೆ ಎಸೆದ ತಾಯಿ : ಬಂಧನ
ಸಾಂದರ್ಭಿಕ ಚಿತ್ರ | Photo:freepik
ಬೆಳಗಾವಿ : ಅಪಸ್ಮಾರ(ಫಿಟ್ಸ್) ಬರುತ್ತೆ ಎಂದು ಎರಡು ತಿಂಗಳ ಹೆಣ್ಣು ಮಗುವನ್ನು ತಾಯಿಯೇ ಕೆರೆಗೆ ಎಸೆದಿರುವಂತಹ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ಕಣಬರಗಿ ಗ್ರಾಮದಲ್ಲಿ ನಡೆದಿದೆ.
ತಾಯಿ-ಮಗುವನ್ನು ಕೆರೆಗೆ ಎಸೆಯುವುದನ್ನು ನೋಡಿದ ದನ, ಕರು ತೊಳೆಯುತ್ತಿದ್ದ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.
ಮಗುವಿನ ರಕ್ಷಣೆ:
ಕಣಬರಗಿ ಗ್ರಾಮದ ನಿವಾಸಿ ಶಾಂತಿ ಕರವಿನಕೊಪ್ಪ ಎಂಬುವವರು ಈ ಕೃತ್ಯವೆಸಗಿದ್ದಾರೆ. ಮಗುವನ್ನು ಕೆರೆಗೆ ಎಸೆದು ಓಡಿ ಹೋಗುತ್ತಿದ್ದ ತಾಯಿಯನ್ನು ತಡೆದು ಸ್ಥಳೀಯರು ಬುದ್ದಿ ಹೇಳಿದ್ದಾರೆ. ಮಗುವನ್ನು ರಕ್ಷಣೆ ಮಾಡಿ ಅವಳ ಕೈಗೆ ನೀಡಿದ್ದಾರೆ. ಬಳಿಕ ಬೆಳಗಾವಿ ನಗರದ ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.
ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಶಾಂತಿ ಗೃಹಿಣಿಯಾಗಿದ್ದಳು. ಇತ್ತ ಗಂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಕೆಲಸಕ್ಕೆ ಹೋಗಿದ್ದಾಗ ಮಗುವನ್ನ ಎತ್ತಿಕೊಂಡು ಕೆರೆ ಬಳಿಗೆ ಬಂದಿದ್ದಾರೆ. ಹೀಗೆ ಕೆರೆಗೆ ಬಂದ ಕೆಲ ಹೊತ್ತು ಅನುಮಾನಾಸ್ಪದವಾಗಿ ಕೆರೆ ಬಳಿ ಓಡಾಡಿದ್ದಾರೆ. ಬಳಿಕ ಮಗುವನ್ನು ಕೆರೆಗೆ ಎಸೆದು ತಾಯಿ ಓಡತೋಡಗಿದ್ದಾರೆ ಎನ್ನಲಾಗಿದೆ.
ಇದನ್ನು ಗಮನಿಸಿದ ಕನ್ನಯ್ಯಾ ಜಂಬಾಳೆ ಎಂಬಾತ ಓಡೋಡಿ ಹೋಗಿದ್ದಾರೆ. ಇದೇ ಕೆರೆಯಲ್ಲಿ ದನ ತೊಳೆಯುತ್ತಿದ್ದ ಜ್ಯೋತಿಬಾ ಎಂಬ ಯುವಕ ಕೂಡಲೇ ಕೆರೆಗೆ ಹಾರಿ ಮಗುವನ್ನ ರಕ್ಷಣೆ ಮಾಡಿದ್ದಾರೆ.
ತಾಯಿ ಬಂಧನ:
ಇನ್ನೂ ಕೆರೆಗೆ ಮಗುವನ್ನು ಎಸೆದು ತಾಯಿ ಶಾಂತಿ ಓಡುತ್ತಿದ್ದಂತೆ ಹಿಂಬಾಲಿಸಿದ ಸ್ಥಳೀಯರು ಕೂಡಲೇ ಆಕೆಯನ್ನು ಹಿಡಿದು ಕೆರೆ ಕಡೆಗೆ ಕರೆದುಕೊಂಡು ಬಂದಿದ್ದಾರೆ. ರಕ್ಷಣೆ ಮಾಡಿದ ಮಗುವನ್ನು ಆಕೆ ಕೈಗೆ ಕೊಟ್ಟು ಬುದ್ದಿವಾದ ಹೇಳಿದ್ದಾರೆ. ಆ್ಯಂಬುಲೆನ್ಸ್ ಕರೆಸಿ ಮಗುವನ್ನು ನಗರದಲ್ಲಿರುವ ಚಿಕ್ಕ ಮಕ್ಕಳ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಬಳಿಕ ಆಸ್ಪತ್ರೆಗೆ ಹೋಗಿ ಮಗುವಿನ ಆರೋಗ್ಯದ ಕುರಿತು ವಿಚಾರಿಸಿ ಅಲ್ಲೇ ಇದ್ದ ತಾಯಿ ಶಾಂತಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.