ಬೆಳಗಾವಿ ಅಧಿವೇಶನ | ನಿಲ್ಲದ ಬಿಜೆಪಿ ‘ಬಣ ರಾಜಕಾರಣ’ ; ‘ನಿಮ್ಮದು ಒಳ್ಳೇ ತಲೆನೋವು’ ಎಂದು ಅಸಮಾಧಾನ ವ್ಯಕ್ತಪಡಿಸಿದ ಆರ್.ಅಶೋಕ್
ಬೆಳಗಾವಿ : ವಿಧಾನ ಮಂಡಲ ಅಧಿವೇಶನದಲ್ಲಿ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಬೇಕಾದ ಪ್ರತಿಪಕ್ಷ ಬಿಜೆಪಿ, ಬಣ ರಾಜಕೀಯದಿಂದ ಸೊರಗುತ್ತಿದೆ. ‘ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಪ್ರಹಾರ’ ವಿಷಯ ಸದನದಲ್ಲಿ ಪ್ರಸ್ತಾಪಿಸುವ ವೇಳೆ ಬಂಡಾಯ ಬಹಿರಂಗವಾಯಿತು.
ಗುರುವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಪೊಲೀಸರು ರೈತರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿದರು. ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯ ವಿಜಯಾನಂದ ಕಾಶೆಪ್ಪನವರ್, ‘ಡಿ.10ರಂದು ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಬಿಜೆಪಿ-ಆರೆಸೆಸ್ಸ್ ಪ್ರೇರಿತ. ಕಲ್ಲು ತೂರಾಟ ನಡೆಸಿದವರು ನಮ್ಮ ಸಮುದಾಯಕ್ಕೆ ಸೇರಿದವರಲ್ಲ ಎಂದು ತಿರುಗೇಟು ನೀಡಿದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯರಾದ ವಿಜಯೇಂದ್ರ, ಸುರೇಶ್ ಗೌಡ, ವಿ.ಸುನಿಲ್ ಕುಮಾರ್, ‘ಬಿಜೆಪಿ-ಆರೆಸೆಸ್ಸ್ ಪ್ರೇರಿತ ಹೋರಾಟ’ ಎಂಬುದು ಸರಿಯಲ್ಲ. ಆ ಪದವನ್ನು ಕಡತದಿಂದ ತೆಗೆದುಹಾಕಬೇಕು’ ಎಂದು ಆಗ್ರಹಿಸಿ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿಗೆ ಮುಂದಾದರು. ಕೂಡಲೇ ಪ್ರತಿಪಕ್ಷ ನಾಯಕರ ಬಳಿಗೆ ಧಾವಿಸಿದ ಪ್ರತಿಪಕ್ಷ ಸಚೇತಕ ದೊಡ್ಡನಗೌಡ ಪಾಟೀಲ್, ‘ಧರಣಿಗೆ ಹೋಗುವುದು ಬೇಡ’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಖಾದರ್ ಸದನವನ್ನು ಕೆಲಕಾಲ ಮುಂದೂಡಿದರು. ಈ ವೇಳೆ ಸದನದಿಂದ ಹೊರಬಂದ ಬಿಜೆಪಿ ಸದಸ್ಯ ಸುರೇಶ್ ಗೌಡ, ‘ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುವ ನಿಟ್ಟಿನಲ್ಲಿ ವಿಪಕ್ಷ ಸರಿಯಾಗಿ ತೀರ್ಮಾನ ಮಾಡುವುದಿಲ್ಲ’ ಎಂದು ಏರಿದ ಧ್ವನಿಯಲ್ಲಿ, ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಪ್ರಶ್ನಿಸಿದರು. ಇದೇ ವೇಳೆ ಅಲ್ಲಿಗೆ ಧಾವಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಳಿ, ‘ಒಬ್ಬರು ಧರಣಿ ಮಾಡೋಣ ಅಂತಾರೇ, ಮತ್ತೊಬ್ಬರೂ ಬೇಡ ಎನ್ನುತ್ತಾರೆ, ಇದು ಒಳ್ಳೇ ತಲೆನೋವು’ ಎಂದು ಅಶೋಕ್ ಆಕ್ಷೇಪಿದರು.
ಯತ್ನಾಳ್ ಗೈರು: ಈ ಮಧ್ಯೆ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವ ಘಟನೆ ಖಂಡಿಸಿ ಬಿಜೆಪಿ ಮುಖಂಡರು ಸುವರ್ಣ ವಿಧಾನಸೌಧದ ಆವರಣದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಗೈರು ಹಾಜರಾಗಿದ್ದು, ಬಿಜೆಪಿಯ ಬಣ ರಾಜಕಾರಣಕ್ಕೆ ಸಾಕ್ಷಿಯಾಗಿತ್ತು.