ಬೆಳಗಾವಿ ಅಧಿವೇಶನ | ಸದನದಲ್ಲಿ ಪ್ರತಿಧ್ವನಿಸಿದ ಮುನಿರತ್ನ ವಿರುದ್ಧದ ಜಾತಿ ನಿಂದನೆ ಪ್ರಕರಣ ; ಆಡಳಿತ-ಪ್ರತಿಪಕ್ಷಗಳ ನಡುವೆ ವಾಕ್ಸಮರ
ಬೆಳಗಾವಿ : ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಜಾತಿ ನಿಂದನೆ ಪ್ರಕರಣವು ಸೋಮವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ, ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿತು.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ ಮತ್ತು ಎಚ್‍ಐವಿ ರೋಗವನ್ನು ಸೋಂಕಿಸಿ ವಿವಿಧ ಗಣ್ಯರ ಜೀವಕ್ಕೆ ಅಪಾಯ ತರಲು ಪ್ರಯತ್ನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಪ್ರಕರಣಗಳ ಕುರಿತು ಚರ್ಚೆ ನಡೆಯಿತು.
ವಿಷಯ ಪ್ರಸ್ತಾವಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಪಿ.ಎಂ.ನರೇಂದ್ರ ಸ್ವಾಮಿ, ಮುನಿರತ್ನ ವಿರುದ್ಧ ಜಾತಿ ನಿಂದನೆ ಆರೋಪ ಬಂದಿದೆ. ಅವರು ಮಾತನಾಡಿರೋದು ಸತ್ಯ ಎಂದು ಎಫ್‍ಎಸ್‍ಎಲ್ ವರದಿಯಲ್ಲಿ ದೃಢವಾಗಿದೆ. ನಾವು ಜಾತಿನಿಂದನೆಯನ್ನು ಸಹಿಸುವುದಿಲ್ಲ. ನಾನು ಅದೇ ಸಮುದಾಯದಿಂದ ಬಂದವನು. ಮುನಿರತ್ನ ವಿರುದ್ಧ ಕ್ರಮ ಆಗಲೆಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಎಸ್ಸಿ, ಎಸ್ಟಿ ಬಗ್ಗೆ ನಿಂದಿಸಿರುವ ಮುನಿರತ್ನಗೆ ಧಿಕ್ಕಾರ. ಅವರನ್ನು ಬೆಂಬಲಿಸುತ್ತಿರುವವರಿಗೆ ಧಿಕ್ಕಾರ ಎಂದು ಎದ್ದು ನಿಂತು ಘೋಷಣೆಗಳನ್ನು ಕೂಗಿದರು. ಈ ವೇಳೆ ಕಾಂಗ್ರೆಸ್ ಸದಸ್ಯರನ್ನು ಸಮಾಧಾನಪಡಿಸಲು ಸ್ಪೀಕರ್ ಯು.ಟಿ.ಖಾದರ್ ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಜಾತಿ ನಿಂದನೆ ಮಾಡಿರುವ ಮುನಿರತ್ನ ಶಾಸಕನಾಗಿರಲು ಸಾಧ್ಯವಿಲ್ಲ. ನಾವು ಜಾತಿ ನಿಂದನೆ ಸಹಿಸಲು ಸಾಧ್ಯವಿಲ್ಲ. ಮುನಿರತ್ನ ಅಸಾಂವಿಧಾನಿಕ ಹಾಗೂ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಸಮುದಾಯವನ್ನು ದೂಷಣೆ ಮಾಡಿದ್ದಾರೆ. ಅಲ್ಲದೇ, ತುಚ್ಛವಾಗಿ ಮಾತನಾಡಿರುವುದು ಆಡಿಯೋದಲ್ಲಿ ಕೇಳಿ ಬಂದಿದೆ. ಈ ಸದನದಿಂದ ಮುನಿರತ್ನರನ್ನು ಅಮಾನತ್ತು ಮಾಡಬೇಕು ಎಂದು ನರೇಂದ್ರ ಸ್ವಾಮಿ ಆಗ್ರಹಿಸಿದರು.
ಮುನಿರತ್ನ ವಿರುದ್ಧ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದ್ದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಕೂಡ ‘ಕಾಂಗ್ರೆಸ್ ವಾಲಾ ಚೋರ್ ಹೈ, ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್’ಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ನ್ಯಾಯಾಲಯದಲ್ಲಿರುವ ವಿಚಾರವನ್ನು ಇಲ್ಲಿ ಚರ್ಚೆ ಮಾಡೋದು ಸರಿಯಲ್ಲ ಎಂದು ಬಿಜೆಪಿಯವರು ಹೇಳಿದರು.
ನರೇಂದ್ರಸ್ವಾಮಿ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ, ಸದನದಲ್ಲಿ ಗದ್ದಲ ಏರ್ಪಟ್ಟಿತು. ಬಳಿಕ ಸ್ಪೀಕರ್ ಯು.ಟಿ.ಖಾದರ್ ಸದನವನ್ನು 10 ನಿಮಿಷ ಮುಂದೂಡಿದರು.