ಬೆಳಗಾವಿ ಅಧಿವೇಶನ | ವಿಧಾನಸಭೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ-2024 ವಿಧೇಯಕ ಮಂಡನೆ
ಬೆಳಗಾವಿ : ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ- 2024 ಅನ್ನು ಮಂಗಳವಾರ ವಿಧಾನಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಂಡನೆ ಮಾಡಿದರು.
ವಿಧೇಯಕದ ಉದ್ದೇಶ: 2011ರ ಜನಗಣತಿಯನುಸಾರ ಮೈಸೂರು ನಗರದ ಜನಸಂಖ್ಯೆ 8,93,062 ಮತ್ತು ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ಜನಸಂಖ್ಯೆಯು 16,96,577 ಆಗಿದೆ. ಪ್ರಸ್ತುತ ನಗರದ ಬೆಳವಣಿಗೆಯು ಮೆಟ್ರೋಪಾಲಿಟಿನ್ ಸಿಟಿಯ ಜನಸಂಖ್ಯೆ ಮತ್ತು ಸ್ಥಾನಮಾನವನ್ನು ಗಳಿಸುತ್ತಿರುವುದನ್ನು ಸೂಚಿಸುತ್ತಿದೆ ಎಂದು ಭೈರತಿ ಸುರೇಶ್ ವಿವರಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯವ್ಯಯ ಮತ್ತು ಇತರೆ ಚಟುವಟಿಕೆಗಳು ಅತಿ ಹೆಚ್ಚಿನ ವ್ಯಾಪ್ತಿಯಲ್ಲಿ ವಿಸ್ತರಣೆಗೊಳ್ಳುತ್ತಿದೆ. ಪ್ರಾಧಿಕಾರವು ತ್ವರಿತ ಬೆಳವಣಿಗೆ ಮತ್ತು ಬೃಹತ್ ಪ್ರಮಾಣದ ಅಭಿವೃದ್ಧಿಗಳ ಕಾರಣದಿಂದಾಗಿ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು.
ಆದುದರಿಂದ, ಪರಿಣಾಮಕಾರಿ ಆಡಳಿತ ಹಾಗೂ ಪ್ರಾಧಿಕಾರದ ಆರ್ಥಿಕ ಸಂಪನ್ಮೂಲಗಳ ನಿರ್ವಹಣೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದ ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಪ್ರತ್ಯೇಕ ಅಧಿನಿಯಮವನ್ನು ತರುವುದು ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.
ಪ್ರಾಧಿಕಾರದ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಸ್ಥಳೀಯ ಯೋಜನಾ ಪ್ರದೇಶದೊಳಗೆ ಸಮನ್ವಯ ಯೋಜನೆ ಮತ್ತು ಅಭಿವೃದ್ಧಿಯು ಅವಶ್ಯಕವಾಗಿದ್ದು, ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮನ್ನಣೆಯನ್ನು ನೀಡುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಾಸನ ರಚನೆಯನ್ನು ಅಗತ್ಯಪಡಿಸಿವೆ. ಆದುದರಿಂದ, ಈ ವಿಧೇಯಕವನ್ನು ತರಲಾಗುತ್ತಿದೆ ಎಂದು ಭೈರತಿ ಸುರೇಶ್ ಹೇಳಿದರು.
ವಿಧೇಯಕ ವಾಪಸ್ :
2024ನೇ ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ(ತಿದ್ದುಪಡಿ) ವಿಧೇಯಕವನ್ನು ಮಂಗಳವಾರ ವಿಧಾನಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಾಪಸ್ ಪಡೆದುಕೊಂಡರು.
ಅಂಗೀಕಾರ :
2024ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ(ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ(ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ವಿಧೇಯಕಕ್ಕೆ ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.