ಬೆಳಗಾವಿ ಅಧಿವೇಶನ | ಮಾರ್ಚ್ ಅಂತ್ಯಕ್ಕೆ ಮತ್ತಷ್ಟು ಬಸ್ಗಳ ಖರೀದಿಗೆ ಕ್ರಮ : ಸಂತೋಷ್ ಲಾಡ್
ಸಂತೋಷ್ ಲಾಡ್
ಬೆಳಗಾವಿ (ಸುವರ್ಣ ವಿಧಾನಸೌಧ) : ರಾಜ್ಯ ಸರಕಾರದ ಶಕ್ತಿ ಯೋಜನೆಯ ಸಮರ್ಪಕ ಅನುಷ್ಠಾನ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಈ ಹಿಂದೆ 16 ತಿಂಗಳಲ್ಲಿ ಅಂದಾಜು 4294 ಬಸ್ಗಳನ್ನು ಖರೀದಿಸಿದ್ದು, ಬರುವ ಮಾರ್ಚ್ ಅಂತ್ಯದೊಳಗೆ ಮತ್ತಷ್ಟು ಬಸ್ ಗಳನ್ನು ಖರೀದಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರ ಕೇಳಿದ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರಿಸಿದ ಸಂತೋಷ್ ಲಾಡ್, ಈಗಾಗಲೇ ನಾಲ್ಕೂ ಸಾರಿಗೆ ನಿಗಮಗಳಲ್ಲಿ 9000 ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಸರಕಾರ ಅನುಮತಿ ನೀಡಿದೆ. ಈ ಪೈಕಿ ಈಗಾಗಲೇ ಅಂದಾಜು 4000 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಬಾಕಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು.
ಶಕ್ತಿ ಯೋಜನೆಯು ಜಾರಿಯಾದ ಬಳಿಕ ವಿಶೇಷವಾಗಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗದಲ್ಲಿ ತೊಡಗಿಕೊಂಡು ಆರ್ಥಿಕ ಅಭಿವೃದ್ದಿ ಸಾಧ್ಯವಾಗಿದೆ ಎಂದು ಸಂತೋಷ್ ಲಾಡ್ ಪ್ರತಿಕ್ರಿಯಿಸಿದರು.