ಬೆಳಗಾವಿ ಅಧಿವೇಶನ | ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ತಿದ್ದುಪಡಿ ವಿಧೇಯಕ ಅಂಗೀಕಾರ
ಬೆಳಗಾವಿ (ಸುವರ್ಣ ವಿಧಾನಸೌಧ) : ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2024 ವಿಧಾನ ಪರಿಷತ್‍ನಲ್ಲಿ ಮಂಗಳವಾರ ಅಂಗೀಕಾರವಾಯಿತು.
ಈ ವೇಳೆ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯರಾದ ಗೋವಿಂದರಾಜು, ಡಾ.ಧನಂಜಯ ಸರ್ಜಿ, ನವೀನ್, ಸಿ.ಟಿ.ರವಿ, ಎನ್.ರವಿಕುಮಾರ್ ಮಾತನಾಡಿ, ಸರಕಾರವು ಬೋರ್‍ವೆಲ್ ಕೊರೆಯಿಸುವ ವಿಷಯದಲ್ಲಿ ಈಗಾಗಲೇ ಹಲವಾರು ಆದೇಶಗಳನ್ನು ಮಾಡಿದೆ. ವಿಧೇಯಕದ ಮೂಲ ಉದ್ದೇಶವು ರೈತ ಪರವಾಗಿರಬೇಕು. ಕೆಲವು ಮಾರ್ಪಾಡುಗಳ ಮೂಲಕ ಕಾಯಿದೆ ಜಾರಿಗೆ ಮುಂದಾಗಬೇಕು. ಮರು ಪರಿಶೀಲನೆ ಮಾಡಿ ಬಿಲ್ಲನ್ನು ಪಾಸು ಮಾಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಬೋರವೆಲ್ ಕೊರೆಯಿಸುವುದರಿಂದ ಆಗುವ ಜೀವಹಾನಿಗೆ ಅನುಷ್ಠಾನ ಏಜೆನ್ಸಿಗಳನ್ನೇ ಹೊಣೆಯಾಗಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಮಾತನಾಡಿ, ಬೋರ್‍ವೆಲ್ ಕೊರೆಯಿಸಿ ಸಂಭವಿಸುವ ಅನಾಹುತದ ಸಂದರ್ಭದಲ್ಲಿ ಉಂಟಾಗುವ ನಷ್ಟವನ್ನು ಏಜೆನ್ಸಿಗಳೇ ಭರಿಸಬೇಕು. ಅನುಷ್ಠಾನ ಏಜೆನ್ಸಿಗಳೇ ಭೂ ಮಾಲಕರಿಗೆ ನಷ್ಠದ ಪರಿಹಾರ ಕೊಡಬೇಕು ಎನ್ನುವ ಅಂಶಗಳು ವಿಧೇಯಕದಲ್ಲಿ ಸೇರ್ಪಡೆಯಾಗಬೇಕು ಎಂದು ಅವರು ಸಲಹೆ ನೀಡಿದರು.
ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರು ಆಗಿರುವ ಸಭಾ ನಾಯಕ ಎನ್.ಎಸ್.ಬೋಸರಾಜು ಅವರು ಸದಸ್ಯರ ಸಲಹೆಗಳ ಬಗ್ಗೆ ಪ್ರತಿಕ್ರಿಯಿಸಿ, ತಿದ್ದುಪಡಿಗೆ ಅನುಮೋದನೆ ನೀಡಬೇಕು, ವಿಧೇಯಕವನ್ನು ಅಂಗೀಕರಿಸಬೇಕು ಎಂದು ಕೋರಿದರು. ಬಳಿಕ ಧ್ವನಿಮತದ ಮೂಲಕ ವಿಧೇಯಕವನ್ನು ಪರಿಷತ್ತನಲ್ಲಿ ಅಂಗೀಕರಿಸಲಾಯಿತು.