ಬೆಳಗಾವಿ ಅಧಿವೇಶನ | ಪ್ರತಿಪಕ್ಷಗಳ ಸಭಾತ್ಯಾಗ ; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ವಿಧೇಯಕ ಅಂಗೀಕಾರ
ಸಚಿವ ಪ್ರಿಯಾಂಕ್ ಖರ್ಗೆ
ಬೆಳಗಾವಿ : ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಯನ್ನು ಕುಲಾಧಿಪತಿಯನ್ನಾಗಿ ಮಾಡುವ 2024ನೇ ಸಾಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ(ತಿದ್ದುಪಡಿ)ವಿಧೇಯಕಕ್ಕೆ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೇ ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.
ವಿಧೇಯಕದ ಕುರಿತು ವಿವರಣೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಈ ವಿಧೇಯಕವನ್ನು ಯಾವುದೇ ರಾಜಕೀಯ ದುರುದ್ದೇಶದಿಂದ ತರುತ್ತಿಲ್ಲ. ನಮ್ಮ ವಿಶ್ವವಿದ್ಯಾಲಯದಲ್ಲಿ ಆಡಳಿತ ನಿರ್ವಹಣೆ ಚುರುಕಾಗಬೇಕು, ಕೆಲಸ ಕಾರ್ಯಗಳು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಯಬೇಕು ಎಂಬ ಉದ್ದೇಶ ಇದರಲ್ಲಿದೆ. ಅಲ್ಲದೇ, ದೇಶದ ಯಾವುದೇ ಕಾನೂನಿನಲ್ಲಿ ರಾಜ್ಯಪಾಲರೇ ಕುಲಾಧಿಪತಿಯಾಗಿರಬೇಕು ಎಂದು ತಿಳಿಸಲಾಗಿಲ್ಲ ಎಂದು ಹೇಳಿದರು.
ಅಸ್ಸಾಂ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ವಿಶ್ವವಿದ್ಯಾಲಯಗಳ ಮುಖ್ಯಸ್ಥರಾಗಿ ಮುಖ್ಯಮಂತ್ರಿಗಳೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆದುದರಿಂದ, ವಿರೋಧ ಪಕ್ಷಗಳ ಆತಂಕದಂತೆ ಇಲ್ಲಿ ಯಾವುದೇ ಬಗೆಯ ರಾಜಕೀಯವಾಗಲಿ, ಸಂಘರ್ಷವಾಗಲಿ ಇಲ್ಲ ಎಂದು ಅವರು ಹೇಳಿದರು.
ಅಲ್ಲದೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಮಹಾತ್ಮ ಗಾಂಧಿ ಹೆಸರು ನಾಮಕರಣ ಮಾಡುವ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ, ಕುಲಾಧಿಪತಿಯಾಗಿ ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಯನ್ನು ಮಾಡಲು ತೆಗೆದುಕೊಂಡು ಬಂದಿರುವ ಈ ತಿದ್ದುಪಡಿ ವಿಧೇಯಕವು ಸದುದ್ದೇಶದಿಂದ ಕೂಡಿಲ್ಲ. ವಿಶ್ವವಿದ್ಯಾಲಯ ಹಾಗೂ ವಿದ್ಯಾಭ್ಯಾಸಕ್ಕೆ ಮಾರಕವಾಗಲಿದೆ. ಖಾಸಗಿ ವಿವಿಗಳ ಮಾದರಿಯಲ್ಲಿ ಬೋರ್ಡ್ ಆಫ್ ಗವರರ್ನರ್ಸ್ ಮಾಡಿ, ಅವುಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಬಿಜೆಪಿ ಹಿರಿಯ ಸದಸ್ಯ ಆರಗ ಜ್ಞಾನೇಂದ್ರ ಮಾತನಾಡಿ, ವಿಶ್ವವಿದ್ಯಾಲಯಗಳನ್ನು ರಾಜಕೀಯಕರಣಗೊಳಿಸುವುದು ಬೇಡ. ಎಲ್ಲ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರೇ ಕುಲಾಧಿಪತಿ. ಅವರ ಅಧಿಕಾರ ಮೊಟಕುಗೊಳಿಸುವ ಈ ತಿದ್ದುಪಡಿ ಕುರಿತು ಸರಕಾರ ಪುನರ್ ಪರಿಶೀಲನೆ ಮಾಡಲಿ ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಶರತ್ ಬಚ್ಚೇಗೌಡ ಮಾತನಾಡಿ, ಇದು ಅತ್ಯಂತ ಸ್ವಾಗತಾರ್ಹ ವಿಧೇಯಕ. ಉಪಕುಲಪತಿಗಳ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬವನ್ನು ತಡೆಯಲು ಹಾಗೂ ವಿವಿಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ತ್ವರಿತವಾಗಿ ತೀರ್ಮಾನ ಕೈಗೊಳ್ಳಲು ಕುಲಾಧಿಪತಿಯಾಗಿ ಮುಖ್ಯಮಂತ್ರಿಗೆ ಅಧಿಕಾರ ನೀಡುವುದು ಸೂಕ್ತವಾಗಿದೆ. ಗುಜರಾತ್ನಲ್ಲಿ ಎಲ್ಲ ವಿವಿಗಳಿಗೆ ಮುಖ್ಯಮಂತ್ರಿಯೇ ಮುಖ್ಯಸ್ಥರಾಗಿದ್ದಾರೆ ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕುಲಾಧಿಪತಿಯಾಗಿ ರಾಜ್ಯಪಾಲರಿದ್ದರೆ ಏನು ಸಮಸ್ಯೆಯಾಗಲಿದೆ ಅನ್ನೋದನ್ನು ವಿವರಿಸಲಿ. ಗುಜರಾತ್ನಲ್ಲಿ ಎಲ್ಲ ವಿವಿಗಳಿಗೆ ಮುಖ್ಯಮಂತ್ರಿಯೇ ಮುಖ್ಯಸ್ಥರಾಗಿದ್ದರೆ. ನಾವು ಗುಜರಾತ್ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ನೇರವಾಗಿ ಹೇಳಿ ಬಿಡಿ ಎಂದರು.
ಇದಕ್ಕೆ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಕ್ಷೇಪ ವ್ಯಕ್ತಪಡಿಸಿ, ದೇಶದಲ್ಲೆ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವ ನಮ್ಮ ರಾಜ್ಯವೇ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.
ನಂತರ ಮಾತು ಮುಂದುವರೆಸಿದ ಅಶೋಕ್, ವಿವಿಗಳಿಗೆ ಉಪಕುಲಪತಿ ನೇಮಕ ಮಾಡಲು ಸರಕಾರವೇ ನೇಮಿಸಿದ ಸಮಿತಿಯೂ ಮೂರು ಹೆಸರುಗಳನ್ನು ಶಿಫಾರಸ್ಸು ಮಾಡುತ್ತದೆ. ಅದರಲ್ಲಿ ಒಂದು ಹೆಸರನ್ನು ರಾಜ್ಯಪಾಲರು ಅನುಮೋದಿಸುತ್ತಾರೆ. ಘಟಿಕೋತ್ಸವಗಳಲ್ಲಿ ಕನಿಷ್ಠ 3-4 ಗಂಟೆ ಇರಬೇಕು. ರಾಜ್ಯದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗೆ ಅಷ್ಟೊಂದು ಸಮಯ ಇದೆಯೇ? ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಈ ಕಾನೂನಿಗೆ ನಮ್ಮ ವಿರೋಧವಿದೆ ಎಂದು ಹೇಳಿದರು. ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಈ ವಿಧೇಯಕವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.