ಬೆಳಗಾವಿ ಅಧಿವೇಶನ | ಪರಿಷತ್‍ನಲ್ಲಿ ಮಹಾತ್ಮಾ ಗಾಂಧಿ ಗುಣಗಾನ
ಬೆಳಗಾವಿ : ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿ ಅವರು ವಹಿಸಿ ನೂರು ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಶತಮಾನೋತ್ಸ್ಸವ ಸಮಾವೇಶ ಕುರಿತ ವಿಶೇಷ ಚರ್ಚೆಯು ವಿಧಾನ ಪರಿಷತ್ ಕಲಾಪದಲ್ಲಿ ಸೋಮವಾರ ನಡೆಯಿತು.
ಈ ವೇಳೆಯಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದ್ದರೆ, ಗೂಡ್ಸೆಯ ಅನುಯಾಯಿಗಳು ಹಿಂಸೆ, ಸುಳ್ಳನ್ನೆ ಅನುಸರಿಸುತ್ತಿದ್ದಾರೆ. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಅಸ್ಪಶ್ಯತೆ ನಿವಾರಣೆಯ ಅಂಗೀಕಾರಕ್ಕೆ ಗಾಂಧೀಜಿ ಮುನ್ನುಡಿ ಬರೆದಿದ್ದರು. ಹೀಗಾಗಿ ಇಂದಿನ ನೂರು ವರ್ಷಗಳ ಕಾರ್ಯಕ್ರಮ ಅತ್ಯಂತ ಮಹತ್ವದಾಗಿದೆ’ ಎಂದರು.
ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ಸ್ವತಂತ್ರ್ಯ ಪೂರ್ವದಲ್ಲಿನ ಕಾಂಗ್ರೆಸ್‍ನಲ್ಲಿ ತೀವ್ರಗಾಮಿ ಹಾಗೂ ಮಂದಗಾಮಿಗಳು ಎಂಬ ಎರಡು ಬಣಗಳಿದ್ದವು. ಬಾಲಗಂಗಾಧರನಾಥ ತಿಲಕ್‍ರಂತಹ ತೀವ್ರಗಾಮಿಗಳು ಹೋರಾಟದ ಮೂಲಕ ಸ್ವರಾಜ್ಯದ ಕಹಳೆ ಮೊಳಗಿಸಿದರೆ, ಮಂದಗಾಮಿಗಳ ಪಡೆಯು ಬ್ರಿಟಿಷರಿಗೆ ಅರ್ಜಿ ಸಲ್ಲಿಸುವ ಮೂಲಕ ಅವರೊಂದಿಗೆ ಚೆನ್ನಾಗಿಯೇ ಇದ್ದರು. ಗಾಂಧಿ ಅವರ ವ್ಯಕ್ತಿತ್ವವನ್ನು ವೈಭವೀಕರಿಸುವ ಮೂಲಕ ಗಾಂಧಿಯನ್ನು ಯಾರ ಕೈಗೂ ಸಿಗದಂತೆ ಕಾಂಗ್ರೆಸ್ ಮಾಡಿದೆ. ಇದನ್ನು ನೋಡಿದರೆ, ಗಾಂಧಿ ಅವರ ವೈಚಾರಿಕಾ ವಾರಸುಧಾರರು ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದರು.
ಸರಳತೆ, ಸತ್ಯ, ಅಹಿಂಸೆ, ರಾಷ್ಟ್ರ ನಿಷ್ಠೆ ಎನ್ನುವುದು ಗಾಂಧಿ ಅವರ ಆಶಯ. ಆದರೆ, ಈಗ ಗಾಂಧಿ ಎಂದು ಹೆಸರಿಟ್ಟುಕೊಂಡರೆ, ಗಾಂಧಿ ಆಗಲು ಸಾಧ್ಯವಿಲ್ಲ. ಅಂತಹವರಿಗೆ ಯಾವುದೇ ಯೋಗ್ಯತೆಯು ಇಲ್ಲ. ಈಗಿನ ಗಾಂಧಿಗಳ ಹೆಸರು ಕೇಳಿದರೆ ಗಾಂಧಿ ಮೇಲೆಯೇ ಅನುಮಾನ ಮೂಡುತ್ತದೆ. ಅವರ ವೈಚಾರಿಕಾ ವಾರಸುಧಾರರು ಯಾರು ಇಲ್ಲ? ಅಧಿಕಾರದ ವಾರಸುದಾರರು ಮಾತ್ರವೇ ಈಗ ಉಳಿದುಕೊಂಡಿದ್ದಾರೆ ಎಂದು ಸಿ.ಟಿ.ರವಿ ಟೀಕಿಸಿದರು.
ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಎಂದೂ ಗಾಂಧಿಯೇ ಹೇಳಿದರೂ, ಆ ಕೆಲಸ ಈವರೆಗೂ ಮಾಡಿಲ್ಲ. ಆದರೀಗ ಗಾಂಧಿ ಹೆಸರು ಕಾಂಗ್ರೆಸ್ ಮೂಲಕ ದುರ್ಬಳಕೆಯಾಗಿದೆ. ಸಾವರ್ಕರ್ ಸೇರಿದಂತೆ ಎಲ್ಲರನ್ನು ಸಮಾನವಾಗಿಯೇ ನೋಡಬೇಕು. ಒಂದು ಘಟನೆಯಿಂದಾಗಿ ಗಾಂಧಿಯನ್ನು ಭಿನ್ನವಾಗಿ ನೋಡಬಾರದು ಎಂದು ಸಿ.ಟಿ.ರವಿ ಪ್ರತಿಪಾದಿಸಿದರು.
ಗೂಡ್ಸೆ ಎಂಬಾತ ಗಾಂಧಿಯನ್ನು ಒಮ್ಮೆ ಮಾತ್ರ ಕೊಂದ. ಆದರೆ ನಾವುಗಳು ಅವರ ವಿಚಾರವನ್ನು ನಿತ್ಯ ಕೊಲ್ಲುತ್ತಿದ್ದೇವೆ. ಭಾರತ ವಿಭಜನೆಗೆ ಗಾಂಧಿ ಒಪ್ಪಿಕೊಂಡಿದ್ದರು. ಶೇ.15 ರಷ್ಟಿದ್ದ ಮುಸ್ಲಿಮರು ಪ್ರತ್ಯೇಕ ಮುಸ್ಲಿಮ್ ದೇಶ ಕೇಳಿದರೆ, ಶೇ.75ರಷ್ಟಿರುವ ನಾವು, ಹಿಂದೂ ದೇಶ ಕೇಳಿದರೆ ತಪ್ಪೇನು? ಎಂದು ಸಿ.ಟಿ.ರವಿ ಪ್ರಶ್ನಿಸಿದರು. ಸಿ.ಟಿ.ರವಿ ಮಾತಿಗೆ ಕೆಂಡಮಂಡಲಗೊಂಡ ಕಾಂಗ್ರೆಸ್ ಸದಸ್ಯರು, ಒಮ್ಮೆಲೆ ಮುಗಿಬಿದ್ದರು.