ಬೆಳಗಾವಿ: ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣ; ತಾಯಿ, ಮಗಳ ಅಂತ್ಯಕ್ರಿಯೆ

ಜ್ಯೋತಿ ಹತ್ತರವಾಠ / ಮೇಘಾ ಹತ್ತರವಾಠ
ಬೆಳಗಾವಿ: ಪ್ರಯಾಗ್ರಾಜ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಠ (50), ಹಾಗೂ ಮೇಘಾ ಹತ್ತರವಾಠ ಅವರ ಅಂತ್ಯಸಂಸ್ಕಾರ ಇಲ್ಲಿನ ಶಹಾಪುರ ಸ್ಮಶಾನದಲ್ಲಿ ಶುಕ್ರವಾರ ಬೆಳಿಗ್ಗೆ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಿತು. ಜ್ಯೋತಿ ಅವರ ಪತಿ ದೀಪಕ್ ಇಬ್ಬರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಜ.28ರಂದು ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ತಾಯಿ, ಮಗಳು ಸೇರಿ ನಾಲ್ವರು ಸಾವಿಗೀಡಾಗಿದ್ದರು. ಜ್ಯೋತಿ ಹಾಗೂ ಮೇಘಾ ಅವರ ಮೃತದೇಹಗಳನ್ನು ದೆಹಲಿಯಿಂದ ಗೋವಾಗೆ ಏರ್ ಲಿಫ್ಟ್ ಮಾಡಿ, ಅಲ್ಲಿಂದ ಆಂಬುಲೆನ್ಸ್ ಮೂಲಕ ಬೆಳಗಾವಿಗೆ ತರಲಾಯಿತು. ಗುರುವಾರ ತಡರಾತ್ರಿ 12.30ರ ನಂತರ ಇಬ್ಬರ ಮೃತದೇಹಗಳನ್ನು ಬೆಳಗಾವಿಗೆ ತಂದಾಗ, ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್ ಬರಮಾಡಿಕೊಂಡು ಗೌರವ ಸಲ್ಲಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಅಷ್ಟೊತ್ತಿಗೆ ಶುಕ್ರವಾರ ನಸುಕಿನ 4 ಗಂಟೆಯಾಗಿತ್ತು.
ಅರುಣ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ ಅವರ ಮೃತದೇಹಗಳನ್ನು ಗುರುವಾರ ಸಂಜೆಗೆ ವಿಮಾನ ಮೂಲಕ ಮಾಡಿ ಬೆಳಗಾವಿ ತರಲಾಗಿದ್ದು, ರಾತ್ರಿಯೇ ಅವರ ಅಂತ್ಯಕ್ರಿಯೆ ನಡೆದಿದೆ.