ಬೆಳಗಾವಿ | ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ಆರು ಮಂದಿ ಮೃತ್ಯು
ಬೆಂಗಳೂರು: ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೆ ಸಾವನ್ನಪ್ಪಿ, ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಮೃತರನ್ನು ಧಾರವಾಡ ಹಾಗೂ ಹಾವೇರಿ ಮೂಲದ ಕಾರು ಚಾಲಕ ಶಾರೂಖ್ ಪೆಂಡಾರಿ(30), ಇಕ್ಬಾಲ್ ಜಮಾದಾರ (50), ಹಾವೇರಿಯ ಸಾನಿಯಾ ಲಂಗೋಟಿ (37), ಉಮ್ರಾ ಬೇಗಂ ಲಂಗೋಟಿ (17), ಶಬ್ನಮ್ ಲಂಗೋಟಿ (37), ಫರಾನ್ ಲಂಗೋಟಿ (13) ಎಂದು ಗುರುತಿಸಲಾಗಿದೆ.
ಘಟನೆಯನ್ನು ತೀವ್ರವಾಗಿ ಗಾಯಗೊಂಡವರನ್ನು ಧಾರವಾಡ ಮೂಲದ ಫರ್ಹಾತ್ ಬೆಟಗೇರಿ(18), ಸಾನಿಯಾ ಇಕ್ಬಾಲ್ ಜಮಾದಾರ (36), ಹಾವೇರಿಯ ಸೋಫಿಯಾ ಲಂಗೋಟಿ (22) ಹಾಗೂ ಮಹಿನ್ ಲಂಗೋಟಿ (7) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಲ್ಲರೂ ಒಂದೇ ಕಾರಿನಲ್ಲಿ ಬೆಳಗಾವಿ ಗಡಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಲ್ಯಾಳ ಗ್ರಾಮದ ಸಂಬಂಧಿಕರ ಮದುವೆ ಕಾರ್ಯವಿತ್ತು. ಆ ಮದುವೆಯ ಕೆಲ ಸಾಮಗ್ರಿಗಳು ಇವರ ಕಾರಿನಲ್ಲಿದ್ದವು. ಸಂಬಂಧಿಕರು ಬೇಗ ಬರುವಂತೆ ಕರೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಚಾಲಕ ವೇಗವಾಗಿ ಕಾರು ಓಡಿಸುತ್ತಿದ್ದ ಎಂದು ಹೇಳಲಾಗಿದೆ.
ಈ ವೇಳೆ ಕಿತ್ತೂರು ಕಡೆಯಿಂದ ಬೀಡಿ ಗ್ರಾಮದ ಕಡೆಗೆ ಹೊರಟಿದ್ದ ಕಾರಿನಲ್ಲಿ ಮೂವರು ಮಕ್ಕಳೂ ಸೇರಿದಂತೆ 10 ಮಂದಿ ಪ್ರಯಾಣಿಸುತ್ತಿದ್ದರು. ಕಾರು ಮಂಗೇನಕೊಪ್ಪ ಗ್ರಾಮದ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದ್ದು, ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಮರಕ್ಕೆ ಕಾರು ಗುದ್ದಿದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಈ ಪ್ರಕರಣ ಸಂಬಂಧ ನಂದಗಢ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.