ಬೆಳಗಾವಿ | ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತ್ಯು

ಬೆಳಗಾವಿ: ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಳಗಾವಿ ನಗರದ ಕೋಟೆ ಕೆರೆ ಸಮೀಪ ನಡೆದಿರುವುದಾಗಿ ವರದಿಯಾಗಿದೆ.
ಮೂಡಲಗಿ ತಾಲೂಕಿನ ಪಟಗುಂಡಿ ಗ್ರಾಮದ ಬಸವರಾಜ ಸರವಿ (38) ಹಾಗೂ ಶಿವಲಿಂಗ ಸರವಿ (20) ಮೃತರು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 4 ಬೆಂಗಳೂರು-ಪುಣೆ ರಸ್ತೆಯ ಪಕ್ಕದ ಸರ್ವಿಸ್ ರಸ್ತೆಗೆ ಹೊಂದಿಕೊಂಡಂತೆ ಒಳಚರಂಡಿ ಕಾಮಗಾರಿ ನಡೆಯುತ್ತಿತ್ತು. ಪೈಪ್ಗಳನ್ನು ಅಳವಡಿಸಲು ದೊಡ್ಡ ಗುಂಡಿ ತೆಗೆಯಲಾಗಿತ್ತು. ಇಂದು (ಎ.16) ಪೈಪ್ ಅಳವಡಿಸಲು ಗುಂಡಿಯೊಳಗೆ ಕಾರ್ಮಿಕರಾದ ಬಸವರಾಜ ಮತ್ತು ಶಿವಲಿಂಗ ಇಳಿದಿದ್ದಾರೆ. ಈ ವೇಳೆ ಮೇಲಿದ್ದ ಮಣ್ಣು ಏಕಾಏಕಿ ಕುಸಿದು ಕಾರ್ಮಿಕರಿಬ್ಬರ ಮೇಲೆಯೇ ಬಿದ್ದಿದೆ. ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ವೇಳೆ ಜೊತೆಗೆ ಇದ್ದ ಕಾರ್ಮಿಕರು ಕೂಡಲೇ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿದ್ದರಿಂದ ತಕ್ಷಣವೇ ಅವರನ್ನು ಹೊರ ತೆಗೆಯಲು ಆಗಿಲ್ಲ. ಪರಿಣಾಮ ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.
ಮೃತದೇಹಗಳನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.