ಬೆಳಗಾವಿ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಮಹಿಳೆಯ ರಕ್ಷಣೆಗೆ ಯತ್ನಿಸಿದ ಮೂವರಿಗೆ ಸನ್ಮಾನ
ಹೊಸ ವಂಟಮೂರಿ ನಿವಾಸಿಗಳಾದ ಜಹಾಂಗೀರ್ ತಹಶೀಲ್ದಾರ್, ವಾಸೀಮ್ ಮಕಾನದಾರ ಹಾಗೂ ಸಿದ್ದಪ್ಪ ಹೊಳ್ಳಿಕಾರ
ಬೆಳಗಾವಿ: ತಾಲೂಕಿನ ಹೊಸ ವಂಟಮೂರಿನಲ್ಲಿ ಮಹಿಳೆಗೆ ವಿವಸ್ತ್ರಗೊಳಿಸಿ ಥಳಿಸಿ ಮೆರವಣಿಗೆ ಮಾಡುತ್ತಿರುವಾಗ, ಮಹಿಳೆಯ ರಕ್ಷಣೆಗೆ ಧಾವಿಸಿದ ಮೂವರ ಗ್ರಾಮಸ್ಥರಿಗೆ ಪೊಲೀಸ್ ಇಲಾಖೆಯಿಂದ ಶನಿವಾರ ಸನ್ಮಾನಿಸಲಾಯಿತು.
ಮಹಿಳೆಯ ರಕ್ಷಣೆಗೆ ಯತ್ನಿಸಿದ ಜಹಾಂಗೀರ ತಹಶೀಲ್ದಾರ್, ವಾಸೀಮ್ ಮಕಾನದಾರ ಹಾಗೂ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಹೊಳ್ಳಿಕಾರ ಇವರಿಗೆ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ರಾಮಪ್ಪ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಅಲ್ಲದೆ ತಲಾ 5 ಸಾವಿರ ರೂ. ನಗದು ಪುರಸ್ಕಾರ ನೀಡಿದರು.
ಈಸಂದರ್ಭದಲ್ಲಿ ಪ್ರಕರಣವನ್ನು ಭೇದಿಸಿದ ಕಾಕತಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಹುಲಕುಂದ,ಕಾನ್ಸ್ಟೇಬಲ್ ಗಳಾದ ಸುಭಾಷ್ ಬಿಲ್, ವಿಠ್ಠಲ ಪಟ್ಟೇದ, ನಾರಾಯಣ ಚಿಪ್ಪಲಕಟ್ಟಿ, ಮುತ್ತಪ್ಪ ಕಾಣ್ವಿ ಮತ್ತು ಮಂಜುನಾಥ ಠಕ್ಕೇಕರ್ ಅವರನ್ನೂ ಗೌರವಿಸಲಾಯಿತು.
ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ ʼಹೊಸ ವಂಟಮೂರಿಯಲ್ಲಿ ನಡೆದಿದ್ದ ಅಮಾನವೀಯ ಘಟನೆ ತಡೆಯಲು ಯತ್ನಿಸಿದ ಮೂವರನ್ನು ಸನ್ಮಾನಿಸಿದ್ದೇವೆ. ಮುಂದೆ ಅವರಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡುತ್ತೇವೆ. ಇಂತ ಘಟನೆ ನಡೆದಾಗ ಜನರು ಭಯಪಡದೇ ಪೊಲೀಸರಿಗೆ ಮಾಹಿತಿ ನೀಡಬೇಕುʼ ಎಂದು ಮನವಿ ಮಾಡಿಕೊಂಡರು.
ಪ್ರಕರಣವನ್ನು ಭೇದಿಸಿದ ಕಾಕತಿ ಪೊಲೀಸ್ ಠಾಣೆ ಪಿಎಸ್ಐಗೆ 5000 ರೂ, ಹಾಗೂ ಉಳಿದ ಐವರು ಸಿಬ್ಬಂದಿಗಳಿಗೆ ತಲಾ 4000 ರೂಗಳ ಬಹಮಾನವನ್ನು ನೀಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ನಗರ ಪೊಲೀಸ್ ಉಪ ಆಯುಕ್ತೆ ಪಿ.ವಿ.(ಅಪರಾಧ ಮತ್ತು ಸಂಚಾರ ವಿಭಾಗ) ಸ್ನೇಹಾ ಮತ್ತಿತರು ಉಪಸ್ಥಿತರಿದ್ದರು.