ನನ್ನ ಮನಸ್ಸೆಲ್ಲಾ ಕಾಂಗ್ರೆಸ್ ಪಕ್ಷದ ಕಡೆಗಿದೆ : ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್
PC : X
ಬೆಳಗಾವಿ : ‘ನಾನು ಮಾನಸಿಕವಾಗಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿದ್ದೇನೆ. ಆದರೆ, ಇದೀಗ ನನ್ನ ಮನಸ್ಸೆಲ್ಲಾ ಕಾಂಗ್ರೆಸ್ ಪಕ್ಷದ ಕಡೆಗೆ ಇದೆ’ ಎಂದು ಬೆಂಗಳೂರಿನ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ತಮ್ಮ ಮನದ ಇಂಗಿತವನ್ನು ಹೊರಹಾಕಿದ್ದಾರೆ.
ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ಬಿಜೆಪಿ ಶಾಸಕಾಂಗ ಸಭೆಗೂ ಹೋಗಿದ್ದೆ. ಕಳೆದ ಬಾರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಔತಣಕೂಟದಲ್ಲಿಯೂ ಪಾಲ್ಗೊಂಡಿದ್ದೆ. ಈ ಬಾರಿ ಯಾರು ಕರೆದರೂ ಹೋಗ್ತೇನೆ. ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದ್ದು, ಕರೆದರೆ ಅಲ್ಲಿಗೂ ಹೋಗುತ್ತೇನೆ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.
ನಾನು ಇಂದು ನಮ್ಮ ಪಕ್ಷದ ಅಧ್ಯಕ್ಷರ ಜತೆ ಮಾತನಾಡಿದ್ದೇನೆ. ಆದರೆ, ವರಿಷ್ಠರ ಜತೆ ಒಂದು ರೀತಿ, ಮಾಧ್ಯಮಗಳೊಂದಿಗೆ ಮತ್ತೊಂದು ರೀತಿಯಲ್ಲಿ ಮಾತನಾಡುತ್ತಾರೆ. ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುವವರ ಮೇಲೆ ಯಾವುದೇ ಕ್ರಮ ಇಲ್ಲ. ಮೊದಲು ಅವರ ಮೇಲೆ ಕ್ರಮ ಜರುಗಿಸಸಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವುದಕ್ಕೆ ಹೋಗಬೇಡಿ. ಪಕ್ಷಕ್ಕೆ ಡ್ಯಾಮೇಜ್ ಮಾಡುವವರನ್ನು ತಡೆಯಲಿ ಎಂದು ಸವಾಲು ಹಾಕಿದರು.
ಕೆಲ ಬಿಜೆಪಿ ಮುಖಂಡರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ರಾತ್ರಿ ವೇಳೆಯಲ್ಲಿ ಭೇಟಿ ಮಾಡುತ್ತಾರೆ. ಆದರೆ, ನಾನು ಹಗಲು ಹೊತ್ತಿನಲ್ಲೇ ಅವರನ್ನು ಭೇಟಿ ಮಾಡಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ನೇರವಾಗಿ ಹೇಳಲಾಗದೆ ನನ್ನ ಹೆಸರು ಹೇಳ್ತಿದ್ದಾರೆ. ಕ್ಷೇತ್ರ ಕೆಲಸದ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಭೇಟಿ ಮಾಡಿದ್ದೀನಿ. ನನ್ನ ವಿರುದ್ದ ಯಾವುದೇ ಕ್ರಮ ಕೈಗೊಂಡರೂ ಸ್ವಾಗತಿಸುತ್ತೇನೆ ಎಂದು ಹೇಳಿದರು.