ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ | ಸಿ.ಟಿ.ರವಿ ಬಂಧನ
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಲ್ಲೇಖಿಸಿ ಮಾನಹಾನಿ ಪದಬಳಕೆ ಆರೋಪದಡಿ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೇ ಇಲ್ಲಿನ ಹಿರೇಬಾಗೇವಾಡಿ ಠಾಣಾ ಪೊಲೀಸರು ಬಂಧಿಸಿದರು.
ಗುರುವಾರ ವಿಧಾನ ಪರಿಷತ್ತಿನಲ್ಲಿ ತನ್ನನ್ನು ಉಲ್ಲೇಖಿಸಿ ಮಾನಹಾನಿ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸ್ವಯಂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯಾಹ್ನ 1 ಗಂಟೆಗೆ ದೂರು ನೀಡಿದ್ದರು. ಅದರಂತೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 75 ಮತ್ತು 79ರ ಅಡಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು
ಸಂಜೆ ಹೊತ್ತಿಗೆ ಪ್ರಕರಣವೂ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದ ನಡುವೆಯೇ ಸುವರ್ಣ ವಿಧಾನಸೌಧದಲ್ಲೇ ಸಿ.ಟಿ.ರವಿ ಧರಣಿ ಕುಳಿತಿದ್ದರು. ಈ ವೇಳೆ ಹೆಗಲ ಮೇಲೆ ಹೊತ್ತುಕೊಂಡು ಸಿಟಿ ರವಿಯನ್ನು ಪೊಲೀಸರು, ಜೀಪಿನಲ್ಲಿ ಹತ್ತಿಸಿ ಹಿರೇಬಾಗೇವಾಡಿ ಠಾಣೆಗೆ ಕರೆದೊಯ್ದ ಬಂಧಿಸಿದರು.
ಇನ್ನೊಂದೆಡೆ, ಬಂಧಿಸಲಾದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ನೇರವಾಗಿ ಹಿರೇಬಾಗೇವಾಡಿ ಠಾಣೆಗೆ ಕರೆದೊಯ್ದರು. ಅಲ್ಲಿ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡರು. ಆಗ ಅಲ್ಲಿಂದ ಸಿಟಿ ರವಿ ಅವರನ್ನು ಖಾನಾಪುರ ಠಾಣೆಗೆ ಕರೆದೊಯ್ಯಲಾಯಿತು ಎಂದು ಹಿರಿಯ ಪೊಲೀಸ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಯಕರು ವಶಕ್ಕೆ: ಸಿ.ಟಿ.ರವಿ ಬಂಧನ ಖಂಡಿಸಿ ಧರಣಿ ಸುವರ್ಣ ಸೌಧದಲ್ಲಿ ಧರಣಿ ನಡೆಸಿದ ವಿಪಕ್ಷ ನಾಯಕ ಆರ್.ಅಶೋಕ್, ವಿಪಕ್ಷ ಉಪನಾಯಕ ಛಲವಾದಿ ನಾರಾಯಣಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ, ಆರಗ ಜ್ಞಾನೇಂದ್ರ ಸೇರಿದಂತೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು.