ಗಾಂಧಿ ಸತ್ಯ, ಅಹಿಂಸೆ ಪ್ರತಿಪಾದಿಸಿದರೆ ಗೋಡ್ಸೆ ವಿಚಾರ ನಂಬಿದ್ದ ಸಂಘಟನೆಗಳು ಹಿಂಸೆಯಲ್ಲಿ ತೊಡಗಿದ್ದವು : ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್
ಬೆಳಗಾವಿ : ಸತ್ಯ ಮತ್ತು ಅಹಿಂಸೆಯನ್ನು ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ್ದರು. ಅದೇ ಕಾಲಘಟ್ಟದಲ್ಲಿ ಗೋಡ್ಸೆ ವಿಚಾರಗಳನ್ನು ನಂಬಿದ್ದ ಸಂಘಟನೆಗಳು ಹಿಂಸೆ, ಗಲಭೆಗಳನ್ನು ಸೃಷ್ಟಿಸುವಲ್ಲಿ ನಿರತರಾಗಿದ್ದರು ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ನಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, 1935ರಲ್ಲಿ ಬ್ರಿಟಿಷರು ಭಾರತ ಸ್ವಾತಂತ್ರ್ಯ ಕಾಯ್ದೆ ಘೋಷಿಸಿ, ದೇಶದ ಜನ ತಮ್ಮ ಆಯ್ಕೆಯನ್ನು ಮುಕ್ತವಾಗಿ ಕೈಗೊಳ್ಳಲು ಅವಕಾಶ ನೀಡಿತ್ತು. ಎಲ್ಲ ಬೆಳವಣಿಗೆಗಳ ನಡುವೆ ಸಮಗ್ರ ರಾಷ್ಟ್ರೀಯತೆಗಾಗಿ, ದೇಶದ ಐಕ್ಯತೆಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಹೋರಾಡಿದ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದಿರುವುದು ಹೆಮ್ಮೆಯ ಸಂಗತಿ ಎಂದರು.
ಇದೇ ಅಧಿವೇಶನದಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಹುಯಿಲಗೋಳ ನಾರಾಯಣರಾವ್ ಬರೆದ ಗೀತೆಯನ್ನು ಬಾಲಕಿ ಗಂಗೂಬಾಯಿ ಹಾನಗಲ್ ಅವರು ಹಾಡಿದ್ದು, ಈ ನಾಡಗೀತೆಗೆ ಕೂಡ ಈಗ ನೂರು ವರ್ಷಗಳಾಗಿರುವುದು ಕನ್ನಡಿಗರೆಲ್ಲ ಅಭಿಮಾನ ಪಡಬೇಕಾದ ಸಂಗತಿಯಾಗಿದೆ ಎಂದು ಹರಿಪ್ರಸಾದ್ ಹೇಳಿದರು.
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಎಲ್ಲ ಅನುಕೂಲಗಳಿದ್ದ ಗಾಂಧೀಜಿಯವರು ಸೂಟು, ಬಟ್ಟೆಗಳನ್ನು ತ್ಯಜಿಸಿ ಸರಳತೆ ಮೈಗೂಡಿಸಿಕೊಂಡರು. ಬಡ ಕುಟುಂಬದಿಂದ ಬಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಇರುವ ಸೂಟುಗಳನ್ನೇ ಅಚ್ಚುಕಟ್ಟಾಗಿ ಧರಿಸಿ ಉತ್ತಮ ಹೋಟೆಲುಗಳಲ್ಲಿ ವಸತಿ ಮಾಡುವ ಮೂಲಕ ತನ್ನ ತಳಸಮುದಾಯಕ್ಕೆ ಮಾದರಿಯಾದ, ಶಿಸ್ತಿನ ಬದುಕು ಪರಿಚಯಿಸಲು ಶ್ರಮಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿಯವರ ಅನೇಕ ವಿಚಾರಗಳ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದರು ಕೂಡ ಪೂನಾ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮಹಾತ್ಮ ಗಾಂಧೀಜಿಯವರ ಪ್ರಾಣ ರಕ್ಷಿಸಿದರು ಎಂದರು.